ಪ್ರಯಾಗ್‌ರಾಜ್ (ಉತ್ತರ ಪ್ರದೇಶ): ದರೋಡೆಕೋರ ಅತೀಕ್ ಅಹ್ಮದ್‌ನ ಸಂಬಂಧಿಯೊಬ್ಬನನ್ನು ಪ್ರಯಾಗ್‌ರಾಜ್ ಪೊಲೀಸರು ಬಂಧಿಸಿದ್ದಾರೆ. ಈಗಾಗಲೇ ದಾಖಲಾಗಿರುವ ಪ್ರಕರಣದ ಆಧಾರದ ಮೇಲೆ ಅತೀಕ್ ಅಹ್ಮದ್ ಸೋದರ ಮಾವ ಮೊಹಮ್ಮದ್ ಅಹ್ಮದ್‌ನನ್ನು ಜೈಲಿಗಟ್ಟಿದ್ದಾರೆ. ಸಬೀರ್ ಹುಸೇನ್ ನೀಡಿದ ದೂರಿನ ಮೇರೆಗೆ ಬಂಧಿತ ಮೊಹಮ್ಮದ್ ಅಹ್ಮದ್ ಸೇರಿದಂತೆ 7 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ₹ 10 ಲಕ್ಷ ಸುಲಿಗೆ, ಬೆದರಿಕೆ, ಹಲ್ಲೆ ಸೇರಿದಂತೆ ಹಲವು ಗಂಭೀರ ಆರೋಪಗಳಡಿ ಕೇಸ್ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಾಗಿ ಹುಡುಕಾಟ ನಡೆಸಿದ್ದರು. ಶುಕ್ರವಾರ ಮೊಹಮ್ಮದ್ ನಿವಾಸದ ಮೇಲೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಅತೀಕ್ ಅಹ್ಮದ್ ಹತ್ಯೆಯ ನಂತರ ಅವನ ಗ್ಯಾಂಗ್ ಮತ್ತು ಗ್ಯಾಂಗ್‌ಗಾಗಿ ಕೆಲಸ ಮಾಡಿದ ಸದಸ್ಯರು ಹಾಗೂ ಹತ್ತಿರದ ಸಂಬಂಧಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಪೊಲೀಸರು ಕಾರ್ಯಾಚರಣೆ ಪ್ರಾರಂಭಿಸಿದ್ದರು. ಈ ಹಿನ್ನೆಲೆ ಅತೀಕ್ ಅಹ್ಮದ್ ಸಹೋದರಿ ಆಯೇಷಾ ನೂರಿ ಹಾಗೂ ಆಕೆಯ ಪತಿ ವಿರುದ್ಧ ಕೂಡ ಪೊಲೀಸರು ಪ್ರಕರಣ ದಾಖಲಿಸಿದ್ದರು. ಇದಾದ ಬಳಿಕ, ಆಯೇಷಾ ನೂರಿ ಪತಿ ಡಾ. ಅಖ್ಲಾಕ್ ಅಹ್ಮದ್‌ನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ತನಿಖೆಯ ಮುಂದುವರೆದ ಭಾಗವಾಗಿ, ಅತೀಕ್ ಸೋದರ ಮಾವ ಮತ್ತು ಸೋದರಳಿಯ ಸೇರಿದಂತೆ 7 ಜನರ ವಿರುದ್ಧ ಗಂಭೀರ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣದ ಹಿನ್ನೆಲೆ: ಅತೀಕ್ ಅಹಮದ್ ಸಹೋದರಿ, ಸೋದರ ಮಾವ, ಸೋದರಳಿಯ ಸೇರಿದಂತೆ 7 ಜನರ ವಿರುದ್ಧ ಪ್ರಕರಣ ದಾಖಲಿಸಿರುವ ಸಾಬೀರ್ ಹುಸೇನ್, ಆಸ್ತಿ ಖರೀದಿ ಮತ್ತು ಮಾರಾಟದ ಕೆಲಸ ಮಾಡುತ್ತಿದ್ದಾನೆ. ಅತೀಕ್ ಸೋದರಳಿಯ ತನ್ನ ಪ್ಲಾಟ್‌ಗೆ ಬಂದು ಹತ್ತು ಲಕ್ಷ ರೂಪಾಯಿ ನೀಡುವಂತೆ ಒತ್ತಾಯಿಸಿದ್ದ. ಜೊತೆಗೆ ಹಣ ನೀಡದಿದ್ದಕ್ಕೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಸಿದ್ದ. ಜುಲೈ 6 ರಂದು ಘಟನೆ ನಡೆದಿದ್ದು, ಬಳಿಕ ಅತೀಕ್‌ನ ಸೋದರಳಿಯ ಝಾಕಾ ತನ್ನ ಸಹಚರರೊಂದಿಗೆ ಮನೆಗೆ ಬಂದು ಥಳಿಸಿದ್ದಾನೆ. ಹಣ ಪಾವತಿಗೆ ಒಪ್ಪಿಗೆ ಸೂಚಿಸಿದ ಬಳಿಕ ಸಾಬೀರ್ ಹುಸೇನ್ ಬಿಡುಗಡೆಗೊಳಿಸಿದ್ದಾರೆ. ಆದರೆ, ಹತ್ತು ದಿನದಲ್ಲಿ ಹತ್ತು ಲಕ್ಷ ರೂಪಾಯಿ ವ್ಯವಸ್ಥೆ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಿರುವುದಾಗಿ ಸಬೀರ್ ತಿಳಿಸಿದ್ದಾನೆ.
ಇದನ್ನೂ ಓದಿ : ಗ್ಯಾಂಗಸ್ಟರ್ ಅಶ್ರಫ್ ಅಹ್ಮದ್ ಹಂತಕರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ ಎಸ್‌ಐಟಿ
ಪ್ರಾಥಮಿಕ ತನಿಖೆಯ ನಂತರ ಪೊಲೀಸರು ಶುಕ್ರವಾರ ಪ್ರಕರಣ ದಾಖಲಿಸಿಕೊಂಡು ಝಾಕಾ ಮನೆ ಮೇಲೆ ದಾಳಿ ನಡೆಸಿ ಆತನ ತಂದೆ ಮೊಹಮ್ಮದ್ ಅಹ್ಮದ್ ನನ್ನು ಬಂಧಿಸಿದ್ದಾರೆ. ಸಂತ್ರಸ್ತ ಸಬೀರ್ ನೀಡಿದ ದೂರಿನ ಮೇರೆಗೆ ಸೆಕ್ಷನ್ 147, 148, 323, 504, 506, 386 ಮತ್ತು 392 ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜೊತೆಗೆ, ಅತೀಕ್ ಅಹ್ಮದ್ ಅವರ ಸಹೋದರಿ ಶಾಹೀನ್, ಸೋದರ ಮಾವ ಮೊಹಮ್ಮದ್ ಅಹ್ಮದ್, ಸೋದರಳಿಯ ಝಕಾ ಹಾಗೂ ವೈಸ್, ಮುಝಮ್ಮಿಲ್, ಶಕೀಲ್ ಮತ್ತು ರಶೀದ್ ಅಲಿಯಾಸ್ ನೀಲು ವಿರುದ್ಧ ಸಹ ಪ್ರಕರಣ ದಾಖಲಾಗಿದೆ. ಇನ್ನೊಂದೆಡೆ, ಈ ಹಿಂದೆ ಕೊಲೆಗೀಡಾದ ರೌಡಿಶೀಟರ್ ಅತೀಕ್ ಅಹ್ಮದ್‌ನ ಇಬ್ಬರು ಅಪ್ರಾಪ್ತ ಪುತ್ರರನ್ನು ಮಕ್ಕಳ ರಕ್ಷಣಾ ಗೃಹದಲ್ಲಿ ಇರಿಸಲಾಗಿದೆ.