ಸಂಭಾಲ್ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ಅತ್ಯಾಚಾರ ಸಂತ್ರಸ್ತ ಯುವತಿಯೊಂದಿಗೆ ಮೊಬೈಲ್‌ನಲ್ಲಿ ಅಶ್ಲೀಲವಾಗಿ ಮಾತನಾಡಿದ ಆರೋಪದ ಮೇಲೆ ಅಪರಾಧ ವಿಭಾಗದ ಪೊಲೀಸ್ ಇನ್ಸ್ಪೆಕ್ಟರ್ವೊಬ್ಬರನ್ನು ಅಮಾನತುಗೊಳಿಸಲಾಗಿದೆ. ಪೊಲೀಸ್ ಅಧಿಕಾರಿಯ ಅಶ್ಲೀಲ ಸಂಭಾಷಣೆಯ ಎರಡು ಆಡಿಯೋಗಳು ವೈರಲ್ ಆಗಿದ್ದು, ಈ ಪ್ರಕರಣದ ಹೆಚ್ಚಿನ ತನಿಖೆಯನ್ನು ಹೆಚ್ಚುವರಿ ಎಸ್ಪಿಗೆ ವಹಿಸಲಾಗಿದೆ.
ಇಲ್ಲಿನ ಗುನ್ನೌರ್ ಪೊಲೀಸ್ ಠಾಣೆಯಲ್ಲಿ ಕಳೆದ ಜೂನ್‌ನಲ್ಲಿ ನಡೆದ ಯುವತಿಯೊಬ್ಬಳ ಮೇಲಿನ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ತನಿಖೆಯನ್ನು ಠಾಣೆಯ ಕ್ರೈಂ ಇನ್ಸ್‌ಪೆಕ್ಟರ್ ಅಶೋಕ್ ಕುಮಾರ್ ನಡೆಸುತ್ತಿದ್ದರು. ಆದರೆ, ತನಿಖಾಧಿಕಾರಿ ಅಶೋಕ್ ಕುಮಾರ್ ವರದಿಯನ್ನು ಸಿದ್ಧಪಡಿಸುವ ನೆಪದಲ್ಲಿ ನೊಂದ ಯುವತಿಗೆ ವಿನಾಕಾರಣ ಹಲವು ಬಾರಿ ವಿಚಾರಣೆ ನಡೆಸಿದ್ದಾರೆ ಎಂದು ಸಂತ್ರಸ್ತೆಯ ಕುಟುಂಬ ಆರೋಪಿಸಿದೆ.
ಅಷ್ಟೇ ಅಲ್ಲ, ಮೊಬೈಲ್ ಫೋನ್ನಲ್ಲಿ ವೈದ್ಯಕೀಯ ವಿಚಾರಣೆಯ ಹೆಸರಲ್ಲಿ ಸಂತ್ರಸ್ತೆಗೆ ಅನೇಕ ಅಶ್ಲೀಲ ಪ್ರಶ್ನೆಗಳನ್ನು ಕೇಳಲಾಗುತ್ತಿತ್ತು. ಆ ಪ್ರಶ್ನೆಗಳಿಗೆ ಸಂತ್ರಸ್ತೆ ಉತ್ತರಿಸಲು ಸಾಧ್ಯವಾಗುತ್ತಿರಲಿಲ್ಲ. ಇನ್ಸ್‌ಪೆಕ್ಟರ್ ಅಶೋಕ್ ಕುಮಾರ್ ವಾಟ್ಸ್ಆ್ಯಪ್ ಕರೆ ಮಾಡುವಂತೆಯೂ ಅತ್ಯಾಚಾರ ಸಂತ್ರಸ್ತೆಗೆ ಒತ್ತಡ ಹೇರಿದ್ದರು ಎಂದು ಕುಟುಂಬಸ್ಥರು ದೂರಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ 1 ನಿಮಿಷ 58 ಸೆಕೆಂಡುಗಳ ಒಂದು ಆಡಿಯೋ ಮತ್ತು 1 ನಿಮಿಷ 10 ಸೆಕೆಂಡುಗಳ ಮತ್ತೊಂದು ಆಡಿಯೋ ಹರಿದಾಡುತ್ತಿದೆ.
ಆರೋಪಿಗಳ ಜೊತೆ ಇನ್ಸ್‌ಪೆಕ್ಟರ್ ಶಾಮೀಲು ಆರೋಪ: ಇದಲ್ಲದೇ, ಆರೋಪಿಗಳ ಜೊತೆ ಇನ್ಸ್‌ಪೆಕ್ಟರ್ ಶಾಮೀಲಾಗಿದ್ದಾರೆ. ಈ ಪ್ರಕರಣದಲ್ಲಿ ಇಬ್ಬರು ಆರೋಪಿಗಳ ಹೆಸರನ್ನು ಮಾತ್ರ ತೆಗೆದುಕೊಳ್ಳುವಂತೆ ಅಧಿಕಾರಿ ಒತ್ತಡ ಹೇರಿದ್ದರು. ಮತ್ತೊಂದೆಡೆ, ಸಾಕ್ಷಿಗಳ ಹೇಳಿಕೆಗಳನ್ನೂ ಸರಿಯಾದ ದಾಖಲಿಸಿಲ್ಲ ಎಂಬ ಗಂಭೀರ ಆರೋಪಗಳನ್ನೂ ಕುಟುಂಬದವರು ಮಾಡಿದ್ದಾರೆ. ಹೀಗಾಗಿ ಇದನ್ನು ಸಂಭಾಲ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್ ಸಿಂಗ್ ಗುಣವತ್ ಗಂಭೀರವಾಗಿ ಪರಿಗಣಿಸಿದ್ದಾರೆ.
ಈ ಸಂಬಂಧ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀಶ್ ಚಂದ್ರ ಪ್ರತಿಕ್ರಿಯಿಸಿ, ಅತ್ಯಾಚಾರ ಸಂತ್ರಸ್ತೆಯೊಂದಿಗೆ ಕ್ರೈಂ ಇನ್ಸ್‌ಪೆಕ್ಟರ್ ಅಶೋಕ್ ಕುಮಾರ್ ಮಾತನಾಡಿದ ಆಡಿಯೋಗಳು ಪೊಲೀಸ್ ಇಲಾಖೆಯ ಗಮನಕ್ಕೆ ಬಂದಿವೆ. ಈ ಕುರಿತು ವರದಿಯನ್ನು ಗುನ್ನೂರು ಪೊಲೀಸ್ ಠಾಣಾಧಿಕಾರಿ ಸಲ್ಲಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಇದರ ಬೆನ್ನಲ್ಲೇ ಆರೋಪಿ ಇನ್ಸ್ಪೆಕ್ಟರ್ ಅಶೋಕ್ ಕುಮಾರ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಎಸ್ಪಿ ಅಮಾನತುಗೊಳಿಸಿ ಆದೇಶಿಸಿದ್ದಾರೆ. ಜೊತೆಗೆ ಈ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸಲು ಹೆಚ್ಚುವರಿ ಎಸ್ಪಿಗೆ ಸೂಚಿಸಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ಕಾರಿನಲ್ಲಿ ಮಹಿಳೆ ಮೇಲೆ ಅತ್ಯಾಚಾರ ಆರೋಪ: ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಅಮಾನತು