ಗೋರಖ್‌ಪುರ (ಉತ್ತರ ಪ್ರದೇಶ): ಜಿಲ್ಲೆಯ ಹರ್‌ಪುರ ಬುಧಾತ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ಬೆಚ್ಚಿ ಬೀಳಿಸುವಂತಹ ಪ್ರಕರಣವೊಂದು ನಡೆದಿದೆ. ವ್ಯಕ್ತಿಯೊಬ್ಬ ತನ್ನ ಪತ್ನಿ ಕೊಲೆ ಮಾಡಿ ರಾತ್ರಿಯಿಡೀ ಮೃತದೇಹದೊಂದಿಗೆ ಮಲಗಿದ್ದನು. ರಾತ್ರಿಯಿಡೀ ಹೆಂಡತಿಯ ಮುಖವನ್ನು ಮುದ್ದಿಸುತ್ತಾ ಅಳುತ್ತಲೇ ಇದ್ದನು. ಪತ್ನಿ ಪ್ರಿಯಾಂಕಾ ಕೊಲೆಯಾಗಿರುವ ಮಹಿಳೆ. ಪತಿ ಅನಿಲ್ ಬೆಲ್ದಾರ್ ಹತ್ಯೆ ಮಾಡಿರುವ ಆರೋಪಿ.
ಬೆಳಗ್ಗೆ ಸೊಸೆ ಕಾಣಿಸದೇ ಇದ್ದಾಗ ಅನುಮಾನ ಬಂದ ಮಾವ, ಅಂದರೆ ಆ ವ್ಯಕ್ತಿಯ ತಂದೆ ಮುನ್ನಿಲಾಲ್ ಬಾಗಿಲು ಬಡಿದು ಕೂಗಿದ್ದಾರೆ. ಆದರೆ, ಪುತ್ರ ಬಾಗಿಲು ತೆಗೆಯದೇ ತಂದೆಯನ್ನು ಗದರಿಸಿ ಕಳುಹಿಸಿದ್ದಾನೆ. ಈ ಬಗ್ಗೆ ತಂದೆ ಪೊಲೀಸರಿಗೆ ಕರೆ ಮಾಡಿದ್ದಾರೆ. ಪೊಲೀಸರು ಕೊಠಡಿಯೊಳಗೆ ಹೋದಾಗ ಅಲ್ಲಿನ ದೃಶ್ಯ ಕಂಡು ಬೆಚ್ಚಿ ಬಿದ್ದಿದ್ದಾರೆ. ಮಹಿಳೆಯ ರಕ್ತಸಿಕ್ತ ಮೃತ ದೇಹವು ಹಾಸಿಗೆಯ ಮೇಲೆ ಬಿದ್ದಿತ್ತು. ಆಕೆಯ ಪತಿ, ಅವಳ ಪಕ್ಕದಲ್ಲೇ ಮಲಗಿಕೊಂಡಿದ್ದ. ಇದನ್ನು ನೋಡಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ವಿರುದ್ಧ ಮೃತ ಮಹಿಳೆಯ ಪೋಷಕರು, ವರದಕ್ಷಿಣೆ ಕಿರುಕುಳ ನೀಡಿ ಹತ್ಯೆ ಮಾಡಲಾಗಿದೆ ಎಂದು ದೂರು ನೀಡಿದ್ದಾರೆ. ಈ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮೃತ ಪತ್ನಿ ಪ್ರಿಯಾಂಕಾ ಜೊತೆ ಅನಿಲ್ ಮಲಗಿದ್ದ. ಪ್ರಿಯಾಂಕಾ ಕುತ್ತಿಗೆಯಲ್ಲಿ ಗಾಯದ ಗುರುತುಗಳು ಕಂಡು ಬಂದಿವೆ. ಆಕೆಯ ಮುಖದ ಮೇಲೂ ಗಾಯದ ಗುರುತುಗಳಾಗಿವೆ. ತಕ್ಷಣ ಪೊಲೀಸರು ಆರೋಪಿ ಪತಿ ಅನಿಲ್ನನ್ನು ವಶಕ್ಕೆ ಪಡೆದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಹರ್ಪುರ್ - ಬುಧಾತ್ ಪ್ರದೇಶದ ಗನೌರಿ ಗ್ರಾಮದ ನಿವಾಸಿ ಮುನ್ನಿಲಾಲ್ ಬೆಲ್ದಾರ್ ಅವರಿಗೆ ಮೂವರು ಗಂಡು ಮಕ್ಕಳಿದ್ದಾರೆ. 30 ವರ್ಷದ ಕಿರಿಯ ಅನಿಲ್ ಬೆಲ್ದಾರ್ ಮೂರು ವರ್ಷಗಳ ಹಿಂದೆ ಖಲೀಲಾಬಾದ್ ಕೊತ್ವಾಲಿಯ ಮಹದೇವ ಗ್ರಾಮದ ಪ್ರಿಯಾಂಕಾ ಬೆಲ್ದಾರ್ (28 ವರ್ಷ) ಅವರನ್ನು ವಿವಾಹವಾಗಿದ್ದರು. ದಂಪತಿಗೆ ಮಕ್ಕಳಾಗಿರಲಿಲ್ಲ.
ಠಾಣೆ ಎದುರು ಮೃತರ ಪೋಷಕರ ಗಲಾಟೆ: ಪ್ರಿಯಾಂಕಾ ಸಾವಿನ ಬಗ್ಗೆ ಮಾಹಿತಿ ತಿಳಿದ ನಂತರ, ಮೃತಕುಟುಂಬದ ಸದಸ್ಯರು ಹಾಗೂ ಸಂಬಂಧಿಕರು ಸೇರಿ ಸುಮಾರು 50 ಜನರು ಹರ್ಪುರ್ - ಬುಧಾತ್ ಪೊಲೀಸ್ ಠಾಣೆಯ ಗನೌರಿ ಗ್ರಾಮಕ್ಕೆ ಆಗಮಿಸಿ ಗಲಾಟೆ ಮಾಡಲು ಪ್ರಾರಂಭಿಸಿದರು. ಪೊಲೀಸ್ ಅಧಿಕಾರಿಗಳು ಎಲ್ಲರಿಗೂ ಮನವೊಲಿಸಿ ಸಮಾಧಾನಪಡಿಸಿದರು. ಬುಧವಾರ ಬೆಳಗ್ಗೆ ಮೃತಳ ತಾಯಿ ಆರತಿದೇವಿ, ತನ್ನ ಅಳಿಯನ ವಿರುದ್ಧ ದೂರು ಕೊಟ್ಟಿದ್ದಾರೆ. ಆರೋಪಿ ಅನಿಲ್ ವಿರುದ್ಧ ಪೊಲೀಸರು ವರದಕ್ಷಿಣೆ ಕೊಲೆ ಸೇರಿದಂತೆ ಇತರೆ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪೊಲೀಸ್ ಮಾಹಿತಿ: ''ಈ ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ, ಸ್ಥಳಕ್ಕೆ ತಲುಪಿ ಬಾಗಿಲು ತೆರೆದಾಗ ಕೋಣೆಯಲ್ಲಿ ಭಯಾನಕ ದೃಶ್ಯಗಳು ಕಂಡು ಬಂದಿವೆ. ಹಾಸಿಗೆಯ ಮೇಲೆ ಪ್ರಿಯಾಂಕಾ ಶವ ಬಿದ್ದಿದ್ದು, ಪಕ್ಕದಲ್ಲಿಯೇ ಆರೋಪಿ ಅನಿಲ್ ಮಲಗಿದ್ದನು. ಇಬ್ಬರಿಗೂ ಮಕ್ಕಳಿಲ್ಲ. ಆರೋಪಿಯನ್ನು ಬಂಧಿಸಲಾಗಿದೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ'' ಎಂದು ಹರ್ಪುರ್ ಬುಧಾತ್ ಪೊಲೀಸ್ ಠಾಣಾಧಿಕಾರಿ ವಿಶಾಲ್ ಉಪಾಧ್ಯಾಯ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಶೌಚಾಲಯಕ್ಕೆ ಹೋಗಬೇಕೆಂದು ಅಜ್ಜಿ ಕೈಗೆ ಹೆಣ್ಣು ಮಗು ಕೊಟ್ಟು ಮಹಿಳೆ ಪರಾರಿ