ಛಪ್ರಾ (ಬಿಹಾರ) : ಆರ್ಕೆಸ್ಟ್ರಾ ಡ್ಯಾನ್ಸರ್ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣ ಬಿಹಾರದ ಛಪ್ರಾದಲ್ಲಿ ಬೆಳಕಿಗೆ ಬಂದಿದೆ. ಸಂತ್ರಸ್ತೆ ಉತ್ತರ ಪ್ರದೇಶದ ಗೊಂಡಾ ನಿವಾಸಿಯಾಗಿದ್ದು, ಬಿಹಾರದ ಆರ್ಕೆಸ್ಟ್ರಾಗಳಲ್ಲಿ ನೃತ್ಯ ಮಾಡುತ್ತಾ ಜೀವನ ನಡೆಸುತ್ತಿದ್ದಳು. ಆದರೆ, ಆರ್ಕೆಸ್ಟ್ರಾ ನಿರ್ದೇಶಕಿ ಮಿಶ್ತಿ ಮನೆಗೆ ಕಳುಹಿಸುವ ನೆಪದಲ್ಲಿ 10 ಸಾವಿರ ರೂ. ಗಳಿಗೆ ಸಂತ್ರಸ್ತೆಯನ್ನು ಮಾರಾಟ ಮಾಡಿದ್ದು, ನಂತರ 15 ಜನರು ಅವಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.
ಸಂತ್ರಸ್ತೆ ಕಾರ್ಯಕ್ರಮ ಮುಗಿಸಿ ಗೊಂಡಾದಲ್ಲಿರುವ ತನ್ನ ಮನೆಗೆ ತೆರಳಲು ಮುಂದಾದಾಗ 15 ಮಂದಿ ಆಕೆಯನ್ನು ಕರೆದುಕೊಂಡು ಹೋಗಿದ್ದಾರೆ. ಬಳಿಕ 7 ದಿನಗಳ ಕಾಲ ಒತ್ತೆಯಾಳಾಗಿ ಇರಿಸಿಕೊಂಡು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ನಂತರ ಪ್ರಜ್ಞೆ ತಪ್ಪಿದ ಸಂತ್ರಸ್ತೆಯನ್ನು ದುಷ್ಕರ್ಮಿಗಳು ನಿರ್ಜನ ಸ್ಥಳದಲ್ಲಿ ಎಸೆದು ಪರಾರಿಯಾಗಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿ ಮಹಿಳೆಯನ್ನು ಅಲ್ಲಿನ ಕೆಲ ಸ್ಥಳೀಯರು ಮೊದಲು ಸದರ್ ಮಶ್ರಕ್ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದಾರೆ. ನಂತರ ಸದರ್ ಆಸ್ಪತ್ರೆಗೆ ದಾಖಲಾದ ಸಂತ್ರಸ್ತೆ, ಚೇತರಿಸಿಕೊಂಡ ಬಳಿಕ ಘಟನೆ ಬಗ್ಗೆ ಸಂಪೂರ್ಣವಾಗಿ ಎಸ್ಪಿ ಗೌರವ್ ಮಂಗಳಾ ಅವರಿಗೆ ದೂರು ನೀಡಿದ್ದಾರೆ.
ಎಸ್ಪಿ ಪ್ರತಿಕ್ರಿಯೆ : ಈ ಘಟನೆ ಕುರಿತು ಎಸ್ಪಿ ಗೌರವ್ ಮಂಗಳಾ ಅವರು ಮಾತನಾಡಿದ್ದು, ಮಶ್ರಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂತ್ರಸ್ತೆ ಮಹಿಳೆಯ ಹೇಳಿಕೆಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಮಹಿಳೆ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದು, ಆಕೆಯ ಸ್ಥಿತಿ ಸ್ಥಿರವಾಗಿದೆ. ಈ ಬಗ್ಗೆ ಪೊಲೀಸರು ಎಲ್ಲ ರೀತಿಯಲ್ಲಿ ತನಿಖೆ ಆರಂಭಿಸಿದ್ದಾರೆ. ಸದರ್ ಆಸ್ಪತ್ರೆಯಲ್ಲಿ ದಾಖಲಾದ ಸಂತ್ರಸ್ತೆಯ ಹೇಳಿಕೆಯನ್ನು ಮಶ್ರಕ್ ಪೊಲೀಸರು ದಾಖಲಿಸಿಕೊಂಡಿದ್ದು, ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.
ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ : ಮಹಾರಾಷ್ಟ್ರದ ಪುಣೆಯಲ್ಲಿ 15 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣ ನಡೆದಿತ್ತು. ಈ ಪ್ರಕರಣದಲ್ಲಿ ಆರು ಮಂದಿಯನ್ನು ಬಂಧಿಸಿದ್ದ ಚತುಶ್ರಿಂಗಿ ಪೊಲೀಸರು, ಬಾಲಕಿಯ ಪೋಷಕರು ನೀಡಿದ ದೂರಿನ ಅನ್ವಯ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಬಾಲಕಿಯ ಮೇಲೆ ಜುಲೈ ಮತ್ತು ಡಿಸೆಂಬರ್ 23, 2022ರ ವರೆಗೂ ನಿರಂತರವಾಗಿ ಅತ್ಯಾಚಾರ ನಡೆದಿದೆ ಎಂದು ಎಂದು ಪೊಲೀಸರು ಮಾಹಿತಿ ನೀಡಿದ್ದರು.
ಸಂತ್ರಸ್ತೆ ಅಪ್ರಾಪ್ತ ವಯಸ್ಕಳು ಎಂದು ತಿಳಿದಿದ್ದರೂ ಆರೋಪಿಗಳಲ್ಲಿ ಒಬ್ಬನು ಚಾಕುವಿನಿಂದ ಬೆದರಿಸಿ ಅವಳೊಂದಿಗೆ ಬಲವಂತವಾಗಿ ಅತ್ಯಾಚಾರ ನಡೆಸಿದ್ದಾನೆ. ನಂತರ ಇತರ ಆರೋಪಿಗಳು ಆಕೆಯ ಫೋಟೋ ತೆಗೆದು ವೈರಲ್ ಮಾಡುವುದಾಗಿ ಬೆದರಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯ ವೇಳೆ ತಿಳಿದು ಬಂದಿತ್ತು.
ಇದನ್ನೂ ಓದಿ : Vijayapura crime: ಪತ್ನಿಯ ಅಪ್ರಾಪ್ತ ಸಹೋದರಿ ಮೇಲೆ ಅತ್ಯಾಚಾರ.. ಕಾಮುಕನಿಗೆ 20 ವರ್ಷ ಜೀವಾವಧಿ ಶಿಕ್ಷೆ ವಿಧಿಸಿದ ಪೋಕ್ಸೋ ಕೋರ್ಟ್