ಹೈದರಾಬಾದ್ : ತೆಲಂಗಾಣ ಪೊಲೀಸರು ಕಳೆದೆರಡು ತಿಂಗಳಲ್ಲಿ 2,200ಕ್ಕೂ ಹೆಚ್ಚು ನಾಪತ್ತೆಯಾದ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ದೂರಸಂಪರ್ಕ ಇಲಾಖೆ (ಡಿಒಟಿ) ಸಹಯೋಗದೊಂದಿಗೆ ಕೇಂದ್ರೀಯ ಸಲಕರಣೆಗಳ ಗುರುತಿನ ನೋಂದಣಿ (Central Equipment Identity Register -CEIR) ಬಳಸಿಕೊಂಡು ನಾಪತ್ತೆಯಾದ ಮೊಬೈಲ್ ಫೋನ್‌ಗಳನ್ನು ಪತ್ತೆ ಮಾಡಿದ್ದಾರೆ.
ಮೊಬೈಲ್ ಕಳ್ಳತನ ಮತ್ತು ನಕಲಿ ಮೊಬೈಲ್‌ಗಳನ್ನು ತಡೆಯುವ ಉದ್ದೇಶದಿಂದ ಸ್ಥಾಪಿಸಲಾಗಿರುವ CEIR ಪೋರ್ಟಲ್ ಏಪ್ರಿಲ್ 19ರಿಂದ ತೆಲಂಗಾಣದಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದೆ. ಇದನ್ನು DoT ಅಭಿವೃದ್ಧಿಪಡಿಸಿದ್ದು, ಪೋರ್ಟಲ್‌ನ ಪೈಲಟ್ ಯೋಜನೆಗೆ ತೆಲಂಗಾಣ ರಾಜ್ಯವನ್ನು ಆಯ್ಕೆ ಮಾಡಲಾಗಿದೆ. 2,219 ಕಳೆದುಹೋದ ಅಥವಾ ಕಾಣೆಯಾದ ಮೊಬೈಲ್ ಸಾಧನಗಳನ್ನು 2 ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಪತ್ತೆ ಹಚ್ಚಲಾಗಿದೆ ಮತ್ತು ಅವನ್ನು ಅವುಗಳ ಮಾಲೀಕರಿಗೆ ಹಸ್ತಾಂತರಿಸಲಾಗಿದೆ ಎಂದು ಸಿಐಡಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಹಾಗೂ ತೆಲಂಗಾಣದಲ್ಲಿ ಸಿಇಐಆರ್ ಪೋರ್ಟಲ್‌ಗೆ ನೋಡಲ್ ಅಧಿಕಾರಿಯಾಗಿ ನೇಮಕಗೊಂಡಿರುವ ಮಹೇಶ್ ಎಂ. ಭಾಗವತ್ ತಿಳಿಸಿದ್ದಾರೆ.
ಏಪ್ರಿಲ್ 13ರಂದು ಡಿಜಿಪಿ ಅಂಜನಿ ಕುಮಾರ್ ಅವರು 60 ಮಾಸ್ಟರ್ ಟ್ರೇನರ್‌ಗಳಿಗೆ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿದ್ದರು. ಏಪ್ರಿಲ್ 18 ರಂದು 31 ಪೊಲೀಸ್ ಘಟಕಗಳ ಅಡಿಯಲ್ಲಿನ ಎಲ್ಲಾ 780 ಪೊಲೀಸ್ ಠಾಣೆಗಳಿಗೆ CEIR ಬಳಕೆದಾರರ ಐಡಿಗಳನ್ನು ವಿತರಿಸಿದ್ದರು. ರಾಷ್ಟ್ರವ್ಯಾಪಿ CEIR ಪೋರ್ಟಲ್ ಅನ್ನು ಮೇ 17 ರಂದು ಅಧಿಕೃತವಾಗಿ ಪ್ರಾರಂಭಿಸಲಾಯಿತು. ಈ ಪೋರ್ಟಲ್ ಪರಿಕಲ್ಪನೆಯನ್ನು ಆರಂಭದಲ್ಲಿ ತೆಲಂಗಾಣದ ಗುಪ್ತಚರ ಇಲಾಖೆಯ ಅಧಿಕಾರಿ ಎಸ್.ಎಂ. ವಿಜಯ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಆರಂಭಿಸಲಾಯಿತು. ನಂತರ CEIR ಪೋರ್ಟಲ್ ಅನ್ನು DOT ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದೆ.
ಸಿಐಡಿ ಸೂಪರ್ ಯೂಸರ್ ಆಗಿ ಎಡಿಜಿಪಿಯವರು ಸಿಇಐಆರ್‌ನ ದೈನಂದಿನ ಪ್ರಗತಿಯನ್ನು ಪರಿಣಾಮಕಾರಿಯಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಇದರ ಪರಿಣಾಮವಾಗಿ ಸಿಐಇಆರ್ ಆರಂಭವಾದ ಮೊದಲ ತಿಂಗಳಲ್ಲಿ 1,000 ಕ್ಕೂ ಹೆಚ್ಚು ಕಳೆದುಹೋದ ಅಥವಾ ಕಾಣೆಯಾದ ಮೊಬೈಲ್‌ಗಳನ್ನು ಅದರ ನಿಜವಾದ ಮಾಲೀಕರಿಗೆ ಪತ್ತೆಹಚ್ಚಿ ಹಸ್ತಾಂತರಿಸಲಾಗಿದೆ ಮತ್ತು 25 ದಿನಗಳಲ್ಲಿ ಅಂದರೆ ಮೇ 23 ರಿಂದ ಜೂನ್ 18 ರವರೆಗೆ 1,160 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ನಾಗರಿಕರಿಂದ ಬಂದ ದೂರುಗಳನ್ನು ಆಧರಿಸಿ ಈ ಅವಧಿಯಲ್ಲಿ ಒಟ್ಟು 34,200 ಮೊಬೈಲ್ ಸಾಧನಗಳನ್ನು ಬ್ಲಾಕ್ ಮಾಡಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. 5,970 ಸಾಧನಗಳ ಪತ್ತೆಹಚ್ಚುವಿಕೆ ವರದಿಗಳನ್ನು ಪಡೆಯಲಾಗಿದೆ ಹಾಗೂ 2,219 ಸಾಧನಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಮತ್ತು ಸರಿಯಾದ ಮಾಲೀಕರಿಗೆ ಹಸ್ತಾಂತರಿಸಲಾಗಿದೆ.
ಕಳೆದುಹೋದ ಅಥವಾ ಕದ್ದ ಮೊಬೈಲ್ ಫೋನ್‌ಗಳನ್ನು ಪತ್ತೆ ಹಚ್ಚುವಲ್ಲಿ ಎಲ್ಲಾ ಪೊಲೀಸ್ ಘಟಕಗಳು ಕೊಡುಗೆ ನೀಡಿವೆ. ಆದಾಗ್ಯೂ ಸೈಬರಾಬಾದ್ ಕಮಿಷನರೇಟ್ ವ್ಯಾಪ್ತಿಯಿಂದ 300 ಮೊಬೈಲ್ ಸಾಧನ, ವಾರಂಗಲ್ ಕಮಿಷನರೇಟ್ ವ್ಯಾಪ್ತಿಯಿಂದ 175 ಮೊಬೈಲ್ ಸಾಧನ, ರಾಚಕೊಂಡ 148 ಮತ್ತು ಕಾಮರೆಡ್ಡಿ ಜಿಲ್ಲೆಯಿಂದ 131 ಮೊಬೈಲ್ ಸಾಧನಗಳನ್ನು ಪತ್ತೆ ಮಾಡಲಾಗಿದೆ.
ಇದನ್ನೂ ಓದಿ : 2000 ರೂ. ನೋಟು ಹಿಂಪಡೆಯುವಿಕೆಯಿಂದ ಬ್ಯಾಂಕ್ಗಳಲ್ಲಿ ಠೇವಣಿ ಹೆಚ್ಚಳ: ಎಸ್ಬಿಐ ವರದಿ