ಜವಾಹರ್ನಗರ (ತೆಲಂಗಾಣ): ತೆಲಂಗಾಣ ರಾಜ್ಯದಲ್ಲಿ ಮನುಕುಲವೇ ತಲೆತಗ್ಗಿಸುವಂತ ಘಟನೆಯೊಂದು ನಡೆದಿದೆ. 28 ವರ್ಷದ ಯುವತಿಯನ್ನು ಬರೋಬ್ಬರಿ 15 ನಿಮಿಷಗಳ ಕಾಲ ನಡುರಸ್ತೆಯಲ್ಲೇ ವಿವಸ್ತ್ರಳಾಗಿ ನಿಲ್ಲಿಸಿದ ಹೀನ ಕೃತ್ಯ ಇದಾಗಿದೆ.
ಹೌದು, ಕುಡಿದ ಅಮಲಿನಲ್ಲಿ ವ್ಯಕ್ತಿಯೋರ್ವ ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿರುವ ಘಟನೆ ಜವಾಹರ್ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಾಲಾಜಿನಗರದಲ್ಲಿ ಭಾನುವಾರ ನಡೆದಿದೆ. ಮದ್ಯದ ಅಮಲಿನಲ್ಲಿ ವ್ಯಕ್ತಿಯು ನಡುರಸ್ತೆಯಲ್ಲೇ ಯುವತಿಯ ಬಟ್ಟೆಯನ್ನು ಹರಿದು ಹಾಕಿ ಅಮಾನವೀಯವಾಗಿ ವರ್ತಿಸಿದ್ದಾನೆ. ಈ ವೇಳೆ ಯುವತಿಯು ವಿವಸ್ತ್ರಳಾಗಿ ಸುಮಾರು 15 ನಿಮಿಷಗಳ ಕಾಲ ನಡುರಸ್ತೆಯಲ್ಲೇ ಅತ್ತಿದ್ದಾಳೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಪೆದ್ದ ಮಾರಯ್ಯನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ನಶೆಯಲ್ಲಿ ಯುವತಿಯನ್ನು ವಿವಸ್ತ್ರಗೊಳಿಸಿದ ವ್ಯಕ್ತಿ : ಪೊಲೀಸರ ಮಾಹಿತಿ ಪ್ರಕಾರ, ಪೆದ್ದ ಮಾರಯ್ಯ ಎಂಬ ವ್ಯಕ್ತಿ ಜವಾಹರನಗರದಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾನೆ. ಕುಡಿತಕ್ಕೆ ದಾಸನಾಗಿರುವ ಈತ ಭಾನುವಾರ ರಾತ್ರಿ 8:30ರ ಸುಮಾರಿಗೆ ತನ್ನ ತಾಯಿಯೊಂದಿಗೆ ಬಾಲಾಜಿನಗರ ಬಸ್ ನಿಲ್ದಾಣದಿಂದ ಮನೆಗೆ ನಡೆದುಕೊಂಡು ಹೋಗುತ್ತಿದ್ದ. ಈ ವೇಳೆ ಸ್ಥಳೀಯ ಯುವತಿಯೊಬ್ಬಳು ಅಂಗಡಿಯಿಂದ ಅದೇ ಮಾರ್ಗವಾಗಿ ನಡೆದುಕೊಂಡು ಬರುತ್ತಿದ್ದಳು. ಆಕೆಯನ್ನು ನೋಡಿದ ಮಾರಯ್ಯ ಯುವತಿಯ ಮೇಲೆ ಕೈಹಾಕಿ ಅಸಭ್ಯವಾಗಿ ವರ್ತಿಸಿದ್ದಾನೆ. ಇದರಿಂದ ಆಕ್ರೋಶಗೊಂಡ ಯುವತಿ ಆತನನ್ನು ದೂರಕ್ಕೆ ತಳ್ಳಿದ್ದಾಳೆ. ಇದರಿಂದ ಮತ್ತಷ್ಟು ಉದ್ರೇಕಗೊಂಡ ಮಾರಯ್ಯ, ಯುವತಿಯ ಬಟ್ಟೆ ಹರಿದು ಹಾಕಿ ವಿವಸ್ತ್ರಗೊಳಿಸಿದ್ದಾನೆ. ಈ ವೇಳೆ ಆತನ ತಾಯಿ ಪಕ್ಕದಲ್ಲಿದ್ದರೂ ಮಗನ ದುಷ್ಕೃತ್ಯವನ್ನು ತಡೆಯುವ ಪ್ರಯತ್ನವನ್ನು ಮಾಡಿಲ್ಲ.
ಇದನ್ನು ಕಂಡ ಬೈಕ್ನಲ್ಲಿ ಹೋಗುತ್ತಿದ್ದ ಮಹಿಳೆಯೊಬ್ಬರು ಈ ಕೃತ್ಯವನ್ನು ತಡೆಯಲು ಯತ್ನಿಸಿದ್ದಾರೆ. ಈ ವೇಳೆ ಪೆದ್ದ ಮಾರಯ್ಯ ಅವರ ಮೇಲೂ ಹಲ್ಲೆಗೆ ಯತ್ನಿಸಿದ್ದಾನೆ. ಈ ಸಂದರ್ಭ ಸಂತ್ರಸ್ತೆ ಸುಮಾರು 15 ನಿಮಿಷಗಳ ಕಾಲ ನಡು ರಸ್ತೆಯಲ್ಲಿ ವಿವಸ್ತ್ರಳಾಗಿ ಅಳುತ್ತಾ ನಿಂತಿದ್ದಳು. ಆದರೂ ರಸ್ತೆಯಲ್ಲಿ ಸಂಚರಿಸುತ್ತಿದ್ದ ಜನರು ಆಕೆಯ ನೆರವಿಗೆ ಬಂದಿಲ್ಲ.
ಆರೋಪಿ ಸ್ಥಳದಿಂದ ತೆರಳಿದ ಬಳಿಕ ಕೆಲವರು ಬಂದು ಆಕೆಗೆ ಬಟ್ಟೆಯನ್ನು ನೀಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಸಿಬ್ಬಂದಿ ಯುವತಿಯನ್ನು ರಕ್ಷಿಸಿ ಮನೆಗೆ ಕಳುಹಿಸಿದ್ದಾರೆ. ಈ ವೇಳೆ ಕುಡಿದ ಮತ್ತಿನಲ್ಲಿ ಪರಾರಿಯಾಗುತ್ತಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಯುವತಿ ಮೇಲೆ ಮಾರಯ್ಯ ಹಲ್ಲೆ ನಡೆಸುತ್ತಿರುವ ದೃಶ್ಯಗಳು ಇಲ್ಲಿನ ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿವೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ : Hyderabad Crime: ರಸ್ತೆಯಲ್ಲಿ ಸಂಚರಿಸುತ್ತಿದ್ದ ನೀರಿನ ಟ್ಯಾಂಕರ್ನಡಿ ತಳ್ಳಿ ಗೆಳತಿಯನ್ನು ಹತ್ಯೆಗೈದ ಪ್ರಿಯಕರ!