ಗಂಜಾಂ (ಒಡಿಶಾ): ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ಇಂದು (ಸೋಮವಾರ) ಭೀಕರ ಹತ್ಯೆ ನಡೆದಿದೆ. ಅಧಿಕ ಪ್ರಮಾಣದ ಬಿಲ್ ನೀಡುತ್ತಿದ್ದಾನೆ ಎಂಬ ಆರೋಪದ ಮೇಲೆ ವಿದ್ಯುತ್ ಮೀಟರ್ ರೀಡರ್ನನ್ನೇ ಹರಿತವಾದ ಆಯುಧಗಳಿಂದ ಇರಿದು ಹತ್ಯೆ ಮಾಡಲಾಗಿದೆ. ಹಂತಕರು ಪರಾರಿಯಾಗಿದ್ದು, ಪ್ರಕರಣ ದಾಖಲಾಗಿದೆ.
ಘಟನೆಯ ವಿವರ: ಗಂಜಾಂ ಜಿಲ್ಲೆಯ ಕುಪಾಟಿ ಗ್ರಾಮದಲ್ಲಿ ಬೆಚ್ಚಿಬೀಳಿಸುವ ಹತ್ಯೆಯಾಗಿದೆ. ಲಕ್ಷ್ಮೀ ನಾರಾಯಣ ತ್ರಿಪಾಠಿ ಮೃತ ವ್ಯಕ್ತಿ. ಹಲವು ವರ್ಷಗಳಿಂದ ಇವರು ವಿದ್ಯುತ್ ಬಿಲ್ ರೀಡರ್ ಆಗಿ ಕೆಲಸ ಮಾಡುತ್ತಿದ್ದರು. ಪ್ರತಿ ತಿಂಗಳು ತನ್ನ ವ್ಯಾಪ್ತಿಯಲ್ಲಿ ಬರುತ್ತಿದ್ದ ಮನೆಗಳಿಗೆ ವಿದ್ಯುತ್ ಬಿಲ್ ವಿತರಿಸುತ್ತಿದ್ದರು. ಆದರೆ ಕೆಲವು ಜನರು ವಿದ್ಯುತ್ ಬಿಲ್ ಪ್ರತಿ ತಿಂಗಳು ಹೆಚ್ಚಾಗಿ ಬರುತ್ತಿದ್ದುದ್ದಕ್ಕೆ ಅಸಮಾಧಾನಗೊಂಡಿದ್ದರು. ಈ ಬಗ್ಗೆ ಹಲವು ಬಾರಿ ರೀಡರ್ ಲಕ್ಷ್ಮೀ ನಾರಾಯಣ ತ್ರಿಪಾಠಿ ಜೊತೆಗೆ ವಾಗ್ವಾದವನ್ನೂ ನಡೆಸಿದ್ದರು. ಆದರೂ ವಿದ್ಯುತ್ ಬಿಲ್ ಅಧಿಕವಾಗಿಯೇ ಬರುತ್ತಿತ್ತು. ಇದು ಜನರನ್ನು ರೊಚ್ಚಿಗೆಬ್ಬಿಸಿದೆ.
ಎಂದಿನಂತೆ ರೀಡರ್ ಲಕ್ಷ್ಮೀ ನಾರಾಯಣ ತ್ರಿಪಾಠಿ ಅವರು ಸೋಮವಾರ (ಆಗಸ್ಟ್ 7) ವಿದ್ಯುತ್ ಬಿಲ್ ನೀಡಲು ಕುಪಾಟಿ ಗ್ರಾಮಕ್ಕೆ ತೆರಳಿದ್ದಾರೆ. ಈ ವೇಳೆ ಕೆಲ ದುಷ್ಕರ್ಮಿಗಳು ತ್ರಿಪಾಠಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ಹರಿತವಾದ ಆಯುಧ ಬಳಸಿ ಇರಿದಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದು ಮನೆಯೊಂದರ ಮುಂದೆ ಅವರು ಸಾವನ್ನಪ್ಪಿದ್ದಾರೆ.
ಘಟನೆಯ ಬಳಿಕ ಆರೋಪಿಗಳು ಊರಿನಿಂದ ಪರಾರಿಯಾಗಿದ್ದಾರೆ. ಮನೆಯೊಂದರ ಮುಂದೆ ತ್ರಿಪಾಠಿ ಹೆಣವಾಗಿದ್ದನ್ನು ಕಂಡು ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಖಾಕಿ ಪಡೆ ಪರಿಶೀಲನೆ ನಡೆಸಿದೆ. ಶವವನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ.
ಇತ್ತ ವಿಷಯ ತಿಳಿದ ವಿದ್ಯುತ್ ಮೀಟರ್ ರೀಡರ್ ನೌಕರರ ಸಂಘದ ಸದಸ್ಯರು ಮತ್ತು ಮೃತ ಸಿಬ್ಬಂದಿಯ ಕುಟುಂಬಸ್ಥರು ಗ್ರಾಮಕ್ಕೆ ಆಗಮಿಸಿ ಪ್ರತಿಭಟನೆ ನಡೆಸಿದ್ದಾರೆ. ಹಂತಕರನ್ನು ಪತ್ತೆ ಮಾಡಿ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
"ನನ್ನ ಸಹೋದರ ಕುಪಾಟಿ ಗ್ರಾಮಕ್ಕೆ ಮೀಟರ್ ರೀಡಿಂಗ್ಗೆ ಬಂದಿದ್ದಾಗ ದುಷ್ಕರ್ಮಿಗಳು ಹಲ್ಲೆ ಮಾಡಿ ಹತ್ಯೆ ಮಾಡಿದ್ದಾರೆ. ಆತ ಯಾವುದೇ ತಪ್ಪು ಮಾಡಿಲ್ಲ. ಹೀಗಿದ್ದರೂ ಭೀಕರವಾಗಿ ಕೊಲೆ ಮಾಡಲಾಗಿದೆ. ಈ ಬಗ್ಗೆ ಗ್ರಾಮಸ್ಥರು ಕೂಡ ನಮಗೆ ಮಾಹಿತಿ ನೀಡಿಲ್ಲ. ಸೂಕ್ತ ತನಿಖೆಯಾಗಬೇಕು, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ" ಎಂದು ಮೃತನ ಸಹೋದರ ಆಗ್ರಹಿಸಿದರು.
ಇದನ್ನೂ ಓದಿ: Nuh violence: ಹರಿಯಾಣ ಹಿಂಸಾಚಾರ: ಅಕ್ರಮ ಕಟ್ಟಡ ಧ್ವಂಸ ಕಾರ್ಯಾಚರಣೆಗೆ ಹೈಕೋರ್ಟ್ ತಡೆ