ಸೂರತ್ (ಗುಜರಾತ್): ಕಂದಾಯ ಗುಪ್ತಚರ ನಿರ್ದೇಶನಾಲಯವು ಗುಜರಾತ್‌ನ ಸೂರತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶಾರ್ಜಾದಿಂದ ಪ್ರಯಾಣಿಸುತ್ತಿದ್ದ ಮೂವರು ಪ್ರಯಾಣಿಕರಿಂದ 25 ಕೋಟಿ ರೂಪಾಯಿ ಮೌಲ್ಯದ 48.2 ಕೆಜಿ ಚಿನ್ನದ ಪೇಸ್ಟ್ ಅನ್ನು ವಶಪಡಿಸಿಕೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದ್ದು, ಕಳ್ಳಸಾಗಣೆಗೆ ಕಡಿವಾಣ ಹಾಕಲಾಗುತ್ತಿದೆ ಎಂದು ಪ್ರಕಟಣೆ ಮೂಲಕ ತಿಳಿಸಿದೆ.
"ನಿರ್ದಿಷ್ಟ ಮಾಹಿತಿ ಆಧಾರದ ಮೇಲೆ DRI ಅಧಿಕಾರಿಗಳು ಸೂರತ್ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜುಲೈ 7 ರಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಮೂಲಕ ಶಾರ್ಜಾದಿಂದ ಇಲ್ಲಿಗೆ ಆಗಮಿಸಿದ ಮೂವರು ಪ್ರಯಾಣಿಕರನ್ನು ತಡೆದು ಪರಿಶೀಲಿಸಿದಾಗ ಪೇಸ್ಟ್ ರೂಪದಲ್ಲಿ ಸಾಗಿಸುತ್ತಿದ್ದ ಚಿನ್ನ ಪತ್ತೆಯಾಗಿದೆ. ಬ್ಯಾಗೇಜ್‌ನ ಒಳಗೆ 20 ಬಿಳಿ ಬಣ್ಣದ ಪ್ಯಾಕೆಟ್‌ಗಳಲ್ಲಿ ಪೇಸ್ಟ್ ರೂಪದಲ್ಲಿ ಚಿನ್ನವನ್ನು ಬಚ್ಚಿಡಲಾಗಿತ್ತು. ಸೂರತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಯೋಜಿಸಲಾದ ಅಧಿಕಾರಿಗಳ ಸಹಾಯದಿಂದ ಕಳ್ಳಸಾಗಣೆ ಮಾಡುತ್ತಿದ್ದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ" ಎಂದು ಹೇಳಿದೆ.
ಪ್ರಯಾಣಿಕರಿಂದ ವಶಪಡಿಸಿಕೊಂಡ ಒಟ್ಟು 48.20 ಕೆಜಿ ಚಿನ್ನದ ಪೇಸ್ಟ್ 25.26 ಕೋಟಿ ಮೌಲ್ಯದ್ದಾಗಿದೆ ಎಂದು ಅಂದಾಜಿಲಾಗಿದೆ. ಕಸ್ಟಮ್ಸ್ ಆಕ್ಟ್ 1962 ರ ಅಡಿಯಲ್ಲಿ ಮೂವರು ಪ್ರಯಾಣಿಕರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪ್ರಯಾಣಿಕರು ಮತ್ತು ಓರ್ವ ಅಧಿಕಾರಿಯನ್ನು ಬಂಧಿಸಲಾಗಿದೆ. ಈ ಕುರಿತು ಹೆಚ್ಚಿನ ತನಿಖೆ ಮುಂದುವರೆದಿದೆ.
ಗುಪ್ತಾಂಗದಲ್ಲಿ 20 ಲಕ್ಷ ರೂ. ಮೌಲ್ಯದ ಚಿನ್ನ ಕಳ್ಳಸಾಗಣೆ : ಇನ್ನು ಇದೇ ತಿಂಗಳ ನಾಲ್ಕನೇ ತಾರೀಖಿನಂದು ಮಹಿಳೆಯೊಬ್ಬರು ಚಿನ್ನದ ಪುಡಿಯನ್ನು ಕ್ಯಾಪ್ಸುಲ್‌ನಲ್ಲಿ ತುಂಬಿ ತನ್ನ ಗುಪ್ತಾಂಗದಲ್ಲಿ ಬಚ್ಚಿಟ್ಟು ಕಳ್ಳಸಾಗಣೆ ಮಾಡಲು ಹೋಗಿ ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ 41 ವರ್ಷದ ಮಹಿಳೆಯನ್ನು ಬಂಧಿಸಲಾಗಿದೆ. ಆಕೆಯ ವಿರುದ್ಧ ಕಸ್ಟಮ್ಸ್ ಕಾಯ್ದೆಯಡಿ ದೂರು ದಾಖಲಿಸಲಾಗಿದೆ.
ಇದನ್ನೂ ಓದಿ : ತನ್ನ ಖಾಸಗಿ ಅಂಗದಲ್ಲಿ 20 ಲಕ್ಷ ರೂ. ಮೌಲ್ಯದ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಮಹಿಳೆ ಅಂದರ್..!
ಮಹಿಳೆಯೊಬ್ಬರು ದುಬೈನಿಂದ ಚಿನ್ನ ತರುತ್ತಿರುವ ಬಗ್ಗೆ ಕಸ್ಟಮ್ಸ್ ಇಲಾಖೆಗೆ ಮಾಹಿತಿ ಸಿಕ್ಕಿತ್ತು. ಅದರಂತೆ ವಿಮಾನ ನಿಲ್ದಾಣದಲ್ಲಿ ಪೊಲೀಸರು ತಪಾಸಣೆ ಹೆಚ್ಚಿಸಿದ್ದರು. ದುಬೈನಿಂದ ಹೊರಟ ವಿಮಾನವು ಪುಣೆಗೆ ಆಗಮಿಸಿದಾಗ ಓರ್ವ ಮಹಿಳೆ ಗಾಬರಿಯಿಂದ ವಿಮಾನ ನಿಲ್ದಾಣದ ಹೊರಗೆ ಹೋಗುತ್ತಿರುವುದನ್ನು ಭದ್ರತಾ ಸಿಬ್ಬಂದಿ ಗಮನಿಸಿದರು. ಮಹಿಳೆಯ ವರ್ತನೆ ಅನುಮಾನ ಹುಟ್ಟುಹಾಕಿದ್ದು, ಭದ್ರತಾ ಸಿಬ್ಬಂದಿ ಆಕೆಯನ್ನು ನಿಲ್ಲಿಸಿ ಪ್ರಶ್ನಿಸಲು ಪ್ರಾರಂಭಿಸಿದರು. ಬಳಿಕ, ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ದು ಎಕ್ಸ್- ರೇ ಪರೀಕ್ಷಿಸಿದಾಗ ಸತ್ಯ ಬಯಲಿಗೆ ಬಂದಿದೆ. ಮಹಿಳೆಯಿಂದ 20 ಲಕ್ಷ 30 ಸಾವಿರ ಮೌಲ್ಯದ 423 ಗ್ರಾಂ 41 ಮಿಲಿಗ್ರಾಂ ಚಿನ್ನದ ಪುಡಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಇದನ್ನೂ ಓದಿ : ಪ್ರಯಾಣಿಕನ ಗುದನಾಳದಲ್ಲಿತ್ತು 42 ಲಕ್ಷ ರೂ ಮೌಲ್ಯದ ಚಿನ್ನ! ಹೈದರಾಬಾದ್ ಏರ್ಪೋರ್ಟ್‌ನಲ್ಲಿ ಸೆರೆ