ಚಂಬಾ (ಹಿಮಾಚಲ ಪ್ರದೇಶ): ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯ ಸಲೂನಿ ಪ್ರದೇಶದ ಭಂಡಾಲ್ ಪಂಚಾಯತ್‌ನಲ್ಲಿ ಮನೋಹರ್ ಎಂಬ ಯುವಕನ ಬರ್ಬರ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಗ್ರಾಮಸ್ಥರ ಆಕ್ರೋಶ ಭುಗಿಲೆದ್ದಿದೆ. ಸಿಟ್ಟಿಗೆದ್ದ ಜನಸಮೂಹ ಸಂಘಾನಿಯಲ್ಲಿ ಆರೋಪಿಯ ಮನೆಯನ್ನು ಬೆಂಕಿ ಹಚ್ಚಿ ಸುಟ್ಟು ಹಾಕಿತು. ಪೊಲೀಸರು ಸ್ಥಳಕ್ಕಾಗಮಿಸುವ ಮುನ್ನವೇ ಗುಂಪು ಚದುರಿತು. ಕೋಪಗೊಂಡ ಗುಂಪು ಕಿಹಾರ್-ಲಂಗೇರಾ ರಸ್ತೆಯಲ್ಲಿ ಕಲ್ಲು ತೂರಾಟವನ್ನೂ ನಡೆಸಿದೆ.
ಚಂಬಾ ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿ: ಜಿಲ್ಲೆಯಾದ್ಯಂತ ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾಡಳಿತ ಸೆಕ್ಷನ್ 144 ಜಾರಿಗೊಳಿಸಿದೆ. ಆದರೆ, ಇದಕ್ಕೂ ಮುನ್ನ ಗುಂಪು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿತ್ತು. ಆ ನಂತರ ಗುಂಪು ಆರೋಪಿ ಕುಟುಂಬದ ಮನೆಯತ್ತ ತೆರಳಿತು. ನಿಯಂತ್ರಿಸಲಾಗದ ಜನರು ಮೊದಲು ಸಂಘಾನಿಯಲ್ಲಿ ಹತ್ಯೆ ಆರೋಪಿಯ ಮನೆಗೆ ಬೆಂಕಿ ಹಚ್ಚಿದರು. ಈ ಹಿನ್ನೆಲೆಯಲ್ಲಿ ಇಡೀ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಆರೋಪಿಯನ್ನು ನೇಣಿಗೇರಿಸಲು ಆಗ್ರಹ: ಭಂಡಾಲ್ ಕಣಿವೆಯಲ್ಲಿ ಯುವಕನ ಹತ್ಯೆಯ ನಂತರ, ಅವನ ಮೃತದೇಹವು ತುಂಡು ತುಂಡುಗಳಾಗಿ ಪತ್ತೆಯಾದ ನಂತರ ಜನರು ಪ್ರತಿಭಟನೆ ಪ್ರಾರಂಭಿಸಿದ್ದಾರೆ. ಅಂದಿನಿಂದ ಪರಿಸ್ಥಿತಿ ತುಂಬಾ ಉದ್ವಿಗ್ನವಾಗಿದೆ. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿವಿಧ ಸಂಘಟನೆಗಳು ಒತ್ತಾಯಿಸುತ್ತಿವೆ. ಎಸ್‌ಐಟಿ ತನಿಖೆಯ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳುತ್ತಿದ್ದರೂ ಜನರು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಆರೋಪಿಯನ್ನು ನೇಣಿಗೆ ಹಾಕುವಂತೆ ಅವರು ಆಗ್ರಹಿಸುತ್ತಿದ್ದಾರೆ.
ಬರ್ಬರ ಹತ್ಯೆಯ ನಂತರ ಎರಡೂ ಸಮುದಾಯದ ಜನರು ಆರೋಪಿ ವಿರುದ್ಧ ಕ್ರಮಕ್ಕೆ ಒತ್ತಾಯಿಸುವುದು ಒಂದೆಡೆಯಾದರೆ, ಬಿಜೆಪಿ ಶಾಸಕರಾದ ಹಂಸರಾಜ್ ಮತ್ತು ಡಿಎಸ್ ಠಾಕೂರ್ ಸಂತ್ರಸ್ತೆಯ ಕುಟುಂಬವನ್ನು ಭೇಟಿ ಮಾಡಿ ನಂತರ ವೇದಿಕೆಯಲ್ಲಿ ಈ ಕುರಿತು ಹಲವು ಹೇಳಿಕೆಗಳನ್ನು ನೀಡಿದ್ದಾರೆ. ನಂತರ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಇಂದು ಈ ಅನಿಯಂತ್ರಿತ ಗುಂಪು ಆರೋಪಿಯ ಮನೆಗೆ ಬೆಂಕಿ ಹಚ್ಚಿದೆ.
ಪ್ರಕರಣದ ಹಿನ್ನೆಲೆ: ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯ ಸಲೂನಿ ಪ್ರದೇಶದಲ್ಲಿ ಮನೋಹರ್ ಜೂನ್ 6ರಿಂದ ನಾಪತ್ತೆಯಾಗಿದ್ದನು. ಜೂನ್ 8 ರಂದು, 28 ವರ್ಷದ ಯುವಕನ ಕುಟುಂಬವು ಕಿಹಾರ್ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಬಗ್ಗೆ ದೂರು ಸಲ್ಲಿಸಿತ್ತು. ಜೂನ್ 9 ರಂದು ಭಂಡಾಲ್ ಪಂಚಾಯಿತಿಯ ಬಳಿ ಗೋಣಿ ಚೀಲದಲ್ಲಿ ಶವ ಪತ್ತೆಯಾಗಿತ್ತು. ಕೊಲೆಯ ನಂತರ, ದೇಹವನ್ನು ಹಲವಾರು ತುಂಡುಗಳಾಗಿ ಕತ್ತರಿಸಲಾಗಿತ್ತು. ದುರ್ವಾಸನೆ ಹರಡಿದ ಹಿನ್ನೆಲೆಯಲ್ಲಿ ಅಕ್ಕಪಕ್ಕದಲ್ಲಿದ್ದವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಸೆಕ್ಷನ್ 302 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು.
ಈವರೆಗೆ 3 ಜನರನ್ನು ಬಂಧಿಸಲಾಗಿದೆ. ಜೂನ್ 9ರಂದು ಶವ ಪತ್ತೆಯಾದ ನಂತರ, ಜೂನ್ 10ರಂದು ಪೊಲೀಸರು ಶಬ್ಬೀರ್ ಎಂಬ ವ್ಯಕ್ತಿಯೊಂದಿಗೆ ಇಬ್ಬರು ಅಪ್ರಾಪ್ತರನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿದ್ದಾರೆ. ಜೂನ್ 12ರಂದು ಶಬ್ಬೀರ್ನನ್ನು ಬಂಧಿಸಲಾಗಿದ್ದು, ನ್ಯಾಯಾಲಯದಿಂದ 5 ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ.
ಮುಸ್ಲಿಂ ಯುವತಿಯನ್ನು ಪ್ರೀತಿಸಿದ್ದಕ್ಕೆ ಕೊಲೆ: ಮನೋಹರ್ ಎಂಬಾತ ಮುಸ್ಲಿಂ ಬಾಲಕಿಯನ್ನು ಪ್ರೀತಿಸುತ್ತಿದ್ದ. ಇದರಿಂದ ಮನೋಹರ್ ಮತ್ತು ಬಾಲಕಿಯ ಮನೆಯವರು ಮೊದಲು ಜಗಳವಾಡಿದ್ದರು. ನಂತರ ಕೊಲೆ ನಡೆದಿದೆ. ಯುವಕನ ಶವವನ್ನು ಹಲವಾರು ತುಂಡುಗಳಾಗಿ ಕತ್ತರಿಸಲಾಗಿತ್ತು. ಬುಧವಾರ, ಜೂನ್ 14 ರಂದು, ಆರೋಪಿಗಳನ್ನು ವಿಚಾರಣೆ ಮಾಡಿದ ನಂತರ, ಪೊಲೀಸರು ಕೊಲೆಗೆ ಬಳಸಿದ ಕೊಡಲಿ ಮತ್ತು ಡಾರ್ಟ್ ಅನ್ನು ಸಹ ವಶಪಡಿಸಿಕೊಂಡಿದ್ದರು.
ಇದೇ ವೇಳೆ ಸಂತ್ರಸ್ತ ಕುಟುಂಬದವರನ್ನು ರಾಜಕೀಯ ಮುಖಂಡರನ್ನು ಭೇಟಿ ಮಾಡುವ ಪ್ರಕ್ರಿಯೆಯೂ ಆರಂಭವಾಯಿತು. ಚಂಬಾ ಜಿಲ್ಲೆಯ ಚುರಾ ಕ್ಷೇತ್ರದ ಬಿಜೆಪಿ ಶಾಸಕ ಹಂಸರಾಜ್ ಮತ್ತು ಡಾಲ್ಹೌಸಿಯ ಬಿಜೆಪಿ ಶಾಸಕ ಡಿಎಸ್ ಠಾಕೂರ್ ಬುಧವಾರ ಕುಟುಂಬವನ್ನು ಭೇಟಿಯಾದರು. ಈ ವಿಚಾರದಲ್ಲಿ ರಾಜಕೀಯ ಮಾಡಬೇಡಿ ಎಂದು ಮುಖ್ಯಮಂತ್ರಿ ಸುಖವಿಂದರ್ ಸುಖು ಹೇಳಿದ್ದಾರೆ.
ಇದನ್ನೂ ಓದಿ: ಜಮ್ಮು ಕಾಶ್ಮೀರದ ಶಾಲೆಯಲ್ಲಿ ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ; ಶಿಕ್ಷಕನ ಬಂಧನ