ಗುವಾಹಟಿ (ಅಸ್ಸೋಂ): ಅಸ್ಸೋಂದ ಗೋಲ್ಪಾರಾ ಜಿಲ್ಲೆಯಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಪಕ್ಷದ ನಾಯಕಿಯೊಬ್ಬರ ಮೃತದೇಹ ರಾಷ್ಟ್ರೀಯ ಹೆದ್ದಾರಿಯ ಬಳಿ ಪತ್ತೆಯಾಗಿದ್ದು, ಕೊಲೆ ಮಾಡಿ ಶವ ಬಿಸಾಡಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಬಿಜೆಪಿ ನಾಯಕರು ರಾಜ್ಯ ಪೊಲೀಸರನ್ನು ಒತ್ತಾಯಿಸಿದ್ದಾರೆ.
ಆಡಳಿತಾರೂಢ ಬಿಜೆಪಿ ನಾಯಕಿ ಜೋನಾಲಿ ನಾಥ್ ಕೊಲೆಯಾದವರಾಗಿದ್ದು, ಈ ಹತ್ಯೆ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಬಿಜೆಪಿ ಸಕ್ರಿಯ ಕಾರ್ಯಕರ್ತೆಯಾಗಿದ್ದ ಜೋನಾಲಿ ನಾಥ್ ಗೋಲ್ಪಾರಾ ಜಿಲ್ಲಾ ಬಿಜೆಪಿ ಕಾರ್ಯದರ್ಶಿಯಾಗಿದ್ದರು. ಮಟಿಯಾ ಪ್ರದೇಶದಲ್ಲಿ ವಾಸಿಸುತ್ತಿದ್ದ ಅವರ ಮೃತದೇಹವು ಭಾನುವಾರ ಮಧ್ಯರಾತ್ರಿ ಕೃಷ್ಣೈನ ಶಾಲ್ಪಾರಾ ಪ್ರದೇಶದಲ್ಲಿ ಎನ್ಹೆಚ್ 17ರ ಬಳಿ ಪತ್ತೆಯಾಗಿದೆ.
ಮೃತದೇಹವನ್ನು ಪೊಲೀಸರು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಕೊಲೆಗೆ ಮುನ್ನ ತೀವ್ರವಾದ ಹಲ್ಲೆಯನ್ನು ಮಾಡಿರುವ ಶಂಕೆ ಇದ್ದು, ದೇಹದ ಮೇಲೆ ಹಲವಾರು ಗಾಯದ ಗುರುತುಗಳನ್ನು ಸಹ ಪತ್ತೆಯಾಗಿವೆ. ಭಾನುವಾರ ಸಂಜೆ 5 ಗಂಟೆ ಸುಮಾರಿಗೆ ಮಟಿಯಾದಲ್ಲಿನ ಹೋಟೆಲ್‌ನಲ್ಲಿ ಜೋನಾಲಿ ನಾಥ್ ಕೊನೆಯದಾಗಿ ರೆಜಾಲ್ ಕರೀಮ್ ಎಂಬುವವರೊಂದಿಗೆ ಕಾಣಿಸಿಕೊಂಡಿದ್ದರು ಎಂದು ತಿಳಿದು ಬಂದಿದೆ.
ಓರ್ವ ಶಂಕಿತ ಪೊಲೀಸ್ ವಶಕ್ಕೆ: ಇದೊಂದು ಪೂರ್ವಯೋಜಿತ ರಾಜಕೀಯ ಕೊಲೆ ಎಂದು ಜೋನಾಲಿ ನಾಥ್ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ. ಸದ್ಯ ಈ ಘಟನೆ ಬಗ್ಗೆ ತನಿಖೆ ಕೈಗೊಂಡಿದ್ದು, ಪ್ರಾಥಮಿಕ ಮಾಹಿತಿಯಲ್ಲಿ ಜೋನಾಲಿ ಮತ್ತು ರೆಜಾಲ್ ಇಬ್ಬರೂ ಕೆಲ ಹಣಕಾಸಿನ ವ್ಯವಹಾರಗಳನ್ನು ಹೊಂದಿದ್ದರು ಎಂದು ಹೇಳಲಾಗುತ್ತಿದೆ. ಹೀಗಾಗಿ ರೆಜಾಲ್ ಕರೀಮ್ನನ್ನು ಪೊಲೀಸರು ಈಗಾಗಲೇ ವಶಕ್ಕೆ ಪಡೆದು ವಿಚಾರಣೆ ನೀಡಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಸಿವಿಲ್ ಆಸ್ಪತ್ರೆಗೆ ಕಳುಹಿಸಿದ್ದೇವೆ. ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ವಿವಿ ರಾಕೇಶ್ ರೆಡ್ಡಿ ತಿಳಿಸಿದ್ದಾರೆ. ಮತ್ತೊಂದೆಡೆ, ಜೋನಾಲಿ ನಾಥ್ ಕೊಲೆ ಬಗ್ಗೆ ಸೂಕ್ತವಾದ ತನಿಖೆ ತನಿಖೆ ನಡೆಸಬೇಕೆಂದು ಬಿಜೆಪಿ ಮುಖಂಡರು ಆಗ್ರಹಿಸಿದ್ದಾರೆ. ಬಿಜೆಪಿ ಹಿರಿಯ ನಾಯಕರಾದ ಶಾಸಕ ಹೇಮಂಗಾ ಠಾಕುರಿಯಾ ಮಾತನಾಡಿ, ಮೃತ ಜೋನಾಲಿ ನಾಥ್ ಬಿಜೆಪಿ ಗೋಲ್ಪಾರಾ ಜಿಲ್ಲಾ ಸಮಿತಿಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರು ಪಕ್ಷದ ಅತ್ಯಂತ ಸಕ್ರಿಯ ಕಾರ್ಯಕರ್ತರಾಗಿದ್ದರು ಎಂದು ಹೇಳಿದ್ದಾರೆ.
ಜೋನಾಲಿ ನಾಥ್ ಅವರೊಂದಿಗೆ ಯಾರಾದರೂ ವೈಯಕ್ತಿಕ ದ್ವೇಷವನ್ನು ಹೊಂದಿರಬಹುದು. ಇದು ಕೊಲೆಯೇ ಆಗಿದ್ದರೆ, ತಪ್ಪಿತಸ್ಥರನ್ನು ತಕ್ಷಣವೇ ಬಂಧಿಸಬೇಕು. ಈ ಪ್ರಕರಣವನ್ನು ಸರಿಯಾಗಿ ತನಿಖೆ ಮಾಡುವಂತೆ ನಾವು ರಾಜ್ಯ ಪೊಲೀಸರನ್ನು ಒತ್ತಾಯಿಸುತ್ತೇವೆ. ಅಲ್ಲದೇ, ಈ ಘಟನೆ ಕುರಿತು ಯಾವುದೇ ರಾಜಕೀಯ ಆಯಾಮದ ಬಗ್ಗೆಯೂ ತನಿಖೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಜಲಸಂಪನ್ಮೂಲ ಸಚಿವ ಪಿಜುಶ್ ಹಜಾರಿಕಾ ಟ್ವೀಟ್ ಮಾಡಿ, ಪಂಚಾಯತ್ ಸದಸ್ಯೆ ಮತ್ತು ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಜೋನಾಲಿ ನಾಥ್ ಅಕಾಲಿಕ ಮರಣದ ದುರಂತ ಘಟನೆಯ ಬಗ್ಗೆ ತೀವ್ರ ನೋವಾಗಿದೆ. ಆಕೆಯ ಸಾವು ತೀವ್ರ ಆಘಾತವನ್ನುಂಟು ಮಾಡಿದೆ. ತ್ವರಿತ ತನಿಖೆಯ ಮೂಲಕ ಈ ಹೇಯ ಕೃತ್ಯದ ಹಿಂದಿನ ಅಪರಾಧಿಗಳನ್ನು ಶೀಘ್ರದಲ್ಲೇ ಬಂಧಿಸಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Murder in Bengaluru: ಡಬಲ್ ಬಾಡಿಗೆ ಕೇಳಿದ ಆಟೋ ಚಾಲಕ.. ಪ್ರಶ್ನಿಸಿದ ಪ್ರಯಾಣಿಕನ ಕೊಲೆ