ಲಖನೌ/ಜೋಧಪುರ: ಇತ್ತೀಚೆಗೆ ಸಿಕ್ಕೀಂನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಹುತಾತ್ಮರಾದ ಏಳು ಜನ ಯೋಧರ ಅಂತ್ಯಸಂಸ್ಕಾರವು ಸೇನಾ ಗೌರವಗಳೊಂದಿಗೆ ಭಾನುವಾರ ನೆರವೇರಿತು. ಒಟ್ಟು 16 ಜನ ಯೋಧರು ಹುತಾತ್ಮರಾಗಿದ್ದರು. ಇದರಲ್ಲಿ ಉತ್ತರ ಪ್ರದೇಶದಕ್ಕೆ ಸೇರಿದ ನಾಲ್ವರು ಯೋಧರು ರಾಜಸ್ಥಾನಕ್ಕೆ ಸೇರಿದ ಮೂವರು ಯೋಧರ ಅಂತ್ಯಕ್ರಿಯೆ ಜನಸಾಗರದ ನಡುವೆ ನಡೆಯಿತು. ಎಲ್ಲೆಡೆಯೂ ಹುತಾತ್ಮ ಸೈನಿಕರನ್ನು ಸ್ಮರಿಸಿ ಅಮರ್ ರಹೇ ಘೋಷಣೆಗಳು ಮೊಳಗಿದವು.
ಯುಪಿಯಲ್ಲಿ ನಾಲ್ವರ ಯೋಧರ ಅಂತ್ಯಸಂಸ್ಕಾರ: ಇದೇ ಡಿ.23ರಂದು ಭಾರತ ಮತ್ತು ಚೀನಾ ಗಡಿ ಸಮೀಪದ ಉತ್ತರ ಸಿಕ್ಕಿಂನಲ್ಲಿ ಸೇನಾ ವಾಹನವು ಕಮರಿಗೆ ಬಿದ್ದು 16 ಸೈನಿಕರು ಮೃತಪಟ್ಟಿದ್ದರು. ಇದರಲ್ಲಿ ಉತ್ತರ ಪ್ರದೇಶದ ಚರಣ್‌ಸಿಂಗ್, ಶ್ಯಾಮ್ ಸಿಂಗ್ ಹಾಗೂ ಭೂಪೇಂದ್ರ ಸಿಂಗ್ ಹಾಗೂ ಲೋಕೇಶ್ ಸೆಹ್ರಾವತ್ ಸೇರಿ ನಾಲ್ವರು ಯೋಧರ ಮೃತದೇಹಗಳನ್ನು ತವರಿಗೆ ರವಾನಿಸಲಾಯಿತು. ಹುತಾತ್ಮ ಯೋಧರ ಕುಟುಂಬಗಳಿಗೆ ರಾಜ್ಯ ಸರ್ಕಾರದಿಂದ ಆರ್ಥಿಕ ನೆರವು ಮತ್ತು ಉದ್ಯೋಗಳು ಮತ್ತು ಜಿಲ್ಲೆಯ ರಸ್ತೆಗೆ ಆ ಯೋಧರ ಹೆಸರಿಡುವುದಾಗಿ ಭರವಸೆ ನೀಡಲಾಯಿತು.
ಲಲಿತ್‌ಪುರ ಜಿಲ್ಲೆಯ ಸೋಜನ ಗ್ರಾಮದ ನಿವಾಸಿ, ಹುತಾತ್ಮ ಯೋಧ ಚರಣ್‌ಸಿಂಗ್ ಹುಕುಮ್ ಸಿಂಗ್ ಅವರ ಪಾರ್ಥಿವ ಶರೀರ ಇಂದು ಬೆಳಗ್ಗೆ ಸ್ವಗ್ರಾಮ ತಲುಪಿತು. ಅಲ್ಲಿ ಸರ್ಕಾರಿ ಗೌರವಗಳೊಂದಿಗೆ ಹುತಾತ್ಮರ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಅಂತಿಮ ಸಂಸ್ಕಾರದ ವೇಳೆ ರಾಜ್ಯ ಸಚಿವರು ಸೇರಿದಂತೆ ಅಧಿಕಾರಿಗಳು ಮತ್ತು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡರು.
ಇದಕ್ಕೂ ಮುನ್ನ ಹುತಾತ್ಮ ಯೋಧ ಚರಣ್‌ಸಿಂಗ್ ಅವರ ಅಂತಿಮ ಯಾತ್ರೆಯನ್ನು ಮನೆಯಿಂದ ನಡೆಸಲಾಯಿತು. ಹಿರಿಯ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ಹಾಗೂ ಸೇನಾ ಸಿಬ್ಬಂದಿ ಪುಷ್ಪನಮನ ಸಲ್ಲಿಸಿ ನಮನ ಸಲ್ಲಿಸಿದರು. ಅಂತಿಮ ಯಾತ್ರೆಯಲ್ಲಿ ಜೈ ಜವಾನ್ ಮತ್ತು ಚರಣ್‌ಸಿಂಗ್ ಅಮರ್ ರಹೇ ಎಂದು ಗ್ರಾಮಸ್ಥರು ಘೋಷಣೆಗಳನ್ನು ಕೂಗಿದರು.
ಕಂಬನಿ ಮಿಡಿದ ಗ್ರಾಮಸ್ಥರು: ಉನ್ನಾವೊದ ಮೀನಾ ಗ್ರಾಮದ ನಿವಾಸಿ, ಹುತಾತ್ಮ ಯೋಧ ಶ್ಯಾಮ್ ಸಿಂಗ್ ಅವರ ಮೃತದೇಹ ಸಹ ಭಾನುವಾರ ಬೆಳಗ್ಗೆ ಸ್ವಗ್ರಾಮಕ್ಕೆ ತಲುಪಿತು. ಮೃತದೇಹ ತಲುಪುತ್ತಿದ್ದಂತೆಯೇ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಅಲ್ಲದೇ, ಗ್ರಾಮದ ಪ್ರತಿಯೊಬ್ಬರು ಸಹ ಹುತಾತ್ಮ ಯೋಧನಿಗೆ ಕಂಬನಿ ಮಿಡಿದರು.
ಮತ್ತೊಂದೆಡೆ, ಸಚಿವರಾದ ರಜನಿ ತಿವಾರಿ, ವಿವಿಧ ಪಕ್ಷಗಳ ಜನಪ್ರತಿನಿಧಿಗಳು, ಉನ್ನಾವೊ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಪೂರ್ವ ದುಬೆ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ್ ಶಂಕರ್ ಮೀನಾ ಗ್ರಾಮಕ್ಕೆ ಆಗಮಿಸಿ, ಹುತಾತ್ಮ ಯೋಧನಿಗೆ ಗೌರವ ಸಲ್ಲಿಸಿದರು. ಈ ವೇಳೆ ಸುತ್ತಮುತ್ತಲ ಗ್ರಾಮಗಳ ಜನರು ಕೂಡ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಆಗಮಿಸಿದ್ದರು.
ಇತ್ತ, ಇಟಾಹ್ ಜಿಲ್ಲೆಯ ಹುತಾತ್ಮ ಯೋಧ ಭೂಪೇಂದ್ರ ಸಿಂಗ್ ಅವರ ಪಾರ್ಥಿವ ಶರೀರವು ಭಾನುವಾರ ಸಂಜೆ ಸ್ವಗ್ರಾಮವನ್ನು ತಲುಪಿತು. ಗ್ರಾಮಕ್ಕೆ ಯೋಧನ ಮೃತದೇಹ ಬರುವ ವಿಷಯ ತಿಳಿದು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮದಲ್ಲಿ ನೆರೆದಿದ್ದರು. ಅದೇ ಸಮಯದಲ್ಲಿ, ಸಚಿವ ಜೈವೀರ್ ಸಿಂಗ್ ರಾಥೋಡ್, ಶಾಸಕ ಸತ್ಯಪಾಲ್ ಸಿಂಗ್ ರಾಥೋಡ್ ಮತ್ತು ಇತರ ಉನ್ನತ ಅಧಿಕಾರಿಗಳು ಸಹ ಗ್ರಾಮಕ್ಕೆ ಆಗಮಿಸಿ ಹುತಾತ್ಮ ಯೋಧನಿಗೆ ಗೌವರ ಸಲ್ಲಿಸಿದರು. ನಂತರ ಅಂತಿಮ ಯಾತ್ರೆಯಲ್ಲಿ ಭಾರತ ಮಾತೆಯ ಜಯಘೋಷದೊಂದಿಗೆ ಶಹೀದ್ ಭೂಪೇಂದ್ರ ಸಿಂಗ್ ಅಮರ್ ರಹೇ ಘೋಷಣೆ ಕೂಗಿ ಅಂತಿಮ ವಿದಾಯ ಹೇಳಿದರು.
ಮುಜಾಫರ್ ನಗರದ ಹುತಾತ್ಮ ಯೋಧ ಲೋಕೇಶ್ ಸೆಹ್ರಾವತ್ ಪಾರ್ಥಿವ ಶರೀರ ಸಹ ಸ್ವಗ್ರಾಮ ಆಗಮಿಸಿತು. ನಂತರ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಿ ಅಂತಿಮ ಯಾತ್ರೆ ನಡೆಸಲಾಯಿತು. ಅಂತಿಮ ಯಾತ್ರೆಯಲ್ಲಿ ಅಪಾರ ಜನಸ್ತೋಮ ನೆರೆದಿತ್ತು. ಭಾರತ್ ಮಾತಾ ಕಿ, ವಂದೇ ಮಾತರಂ, ಲೋಕೇಶ್ ಅಮರ್ ರಹೇ ಘೋಷಣೆಗಳನ್ನು ಕೂಗುತ್ತಲೇ ಯೋಧನಿಗೆ ಅಂತಿಮ ವಿದಾಯ ನೀಡಲಾಯಿತು.
ರಾಜಸ್ಥಾನದಲ್ಲಿ ಮೂವರ ಅಂತ್ಯಕ್ರಿಯೆ: ಸಿಕ್ಕೀಂನಲ್ಲಿ ಹುತಾತ್ಮರಾದ 16 ಯೋಧರ ಪೈಕಿ ರಾಜಸ್ಥಾನದ ಸುಖರಾಮ್, ಮನೋಜ್ ಯಾದವ್ ಮತ್ತು ಗುಮಾನ್ ಸಿಂಗ್ ಸೇರಿದ್ದಾರೆ. ಜೋಧ್‌ಪುರದ ನಿವಾಸಿ ಸುಖರಾಮ್ ಅವರ ಅಂತ್ಯಕ್ರಿಯೆಯನ್ನು ಭಾನುವಾರ ಸೇನಾ ಗೌರವಗಳೊಂದಿಗೆ ನೆರವೇರಿಸಲಾಯಿತು. ಅಂತ್ಯಕ್ರಿಯೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಪಾಲ್ಗೊಂಡಿದ್ದರು. ಹುತಾತ್ಮ ಯೋಧ ಸುಖರಾಮ್ ಅವರ ಗೌರವಾರ್ಥವಾಗಿ ಪಟ್ಟಣದ ಮಾರುಕಟ್ಟೆಗಳು ಮುಚ್ಚಲ್ಪಟ್ಟಿದ್ದವು.
ಮತ್ತೊಬ್ಬ ಯೋಧ ಮನೋಜ್ ಯಾದವ್ ಮೃತದೇಹವು ಭಾನುವಾರ ಬೆಳಗ್ಗೆ ಪಚೇರಿಕಲನ್ಗೆ ತಲುಪಿತು. ಮತ್ತು ಜೈಸಲ್ಮೇರ್‌ನ ಗುಮಾನ್ ಸಿಂಗ್ ಪಾರ್ಥಿವ ಶರೀರ ಸಹ ಸ್ವಗ್ರಾಮಕ್ಕೆ ತಲುಪಿತು. ಗ್ರಾಮಕ್ಕೆ ಯೋಧರ ಪಾರ್ಥಿವ ಶರೀರಗಳು ತಲುಪುತ್ತಿದ್ದಂತೆಯೇ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ನಂತರ ಸರ್ಕಾರಿ ಮತ್ತು ಸೇನಾ ಗೌರವಗಳೊಂದಿಗೆ ಅಂತ್ಯಸಂಸ್ಕಾರ ಮಾಡಲಾಯಿತು.
ಇದನ್ನೂ ಓದಿ: ಭಾರತ-ಚೀನಾ ಗಡಿ ಸಮೀಪ ಕಮರಿಗೆ ಬಿದ್ದ ಸೇನಾ ವಾಹನ: 16 ಯೋಧರು ಹುತಾತ್ಮ