ಕೋಲ್ಕತ್ತಾ: ಕೋವಿಡ್ ಚಿಕಿತ್ಸೆಗಾಗಿ ಆಮ್ಲಜನಕ ಪೂರೈಕೆ ಹೆಚ್ಚಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇದೀಗ ಮತ್ತೊಂದು ಪತ್ರ ಬರೆದಿದ್ದಾರೆ.
ವೈದ್ಯಕೀಯ ಸಲಕರಣೆಗಳ ಮೇಲಿನ ತೆರಿಗೆ ರದ್ದುಗೊಳಿಸುವಂತೆ ಸಿಎಂ ಮಮತಾ ಬ್ಯಾನರ್ಜಿ ಪತ್ರ ಬರೆದು ಕೇಂದ್ರಕ್ಕೆ ಒತ್ತಾಯಿಸಿದ್ದಾರೆ. ಕೋವಿಡ್ ರೋಗದ ವಿರುದ್ಧ ಹೋರಾಟಕ್ಕಾಗಿ ಬಳಸುವ ಉಪಕರಣಗಳು ಮತ್ತು ಔಷಧಿಗಳ ಮೇಲಿನ ಎಲ್ಲ ರೀತಿಯ ತೆರಿಗೆ ಮತ್ತು ಕಸ್ಟಮ್ಸ್ ಸುಂಕ ತೆಗೆದು ಹಾಕುವಂತೆ ಕೇಳಿಕೊಂಡಿದ್ದಾರೆ.
ರಾಜ್ಯದಲ್ಲಿ ಆರೋಗ್ಯ ಮೂಲ ಸೌಕರ್ಯ ಬಲಪಡಿಸಲು ಮತ್ತು ಕೊರೊನಾ ವೈರಸ್ ರೋಗಿಗಳ ಚಿಕಿತ್ಸೆಗೆ ಬಳಸುವ ಉಪಕರಣ ಹಾಗೂ ಔಷಧಿಗಳ ಮೇಲಿನ ತೆರಿಗೆ ತಕ್ಷಣವೇ ರದ್ದು ಮಾಡುವಂತೆ ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಕೋವಿಡ್ ವಿರುದ್ಧ ಹೋರಾಟ ನಡೆಸಿರುವ ಪಶ್ಚಿಮ ಬಂಗಾಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಂಸ್ಥೆಗಳು, ವ್ಯಕ್ತಿಗಳು ಮತ್ತು ಸಂಘಗಳು ಆಮ್ಲಜನಕ ಸಾಂದ್ರಕ, ಸಿಲಿಂಡರ್ ಹಾಗೂ ಕೋವಿಡ್ ಸಂಬಂಧಿತ ಔಷಧಿ ದಾನ ಮಾಡಲು ಮುಂದೆ ಬಂದಿವೆ. ಆದರೆ ಅವುಗಳ ಮೇಲೆ ವಿಧಿಸುವ ಕಸ್ಟಮ್ಸ್ ಸುಂಕ, ಜಿಎಸ್ಟಿ ಸೇರಿದಂತೆ ಅನೇಕ ತೆರಿಗೆ ವಿನಾಯಿತಿ ನೀಡುವಂತೆ ಕೇಳಿಕೊಂಡಿದ್ದಾರೆಂದು ಪತ್ರದಲ್ಲಿ ದೀದಿ ವಿವರಿಸಿದ್ದಾರೆ.
ಇದನ್ನೂ ಓದಿ: 30,000 ಕೋಟಿ ರೂ. ಕೇಂದ್ರಕ್ಕೆ ಏನೂ ಅಲ್ಲ, ಸಾರ್ವಜನಿಕವಾಗಿ ಎಲ್ಲರಿಗೂ ಲಸಿಕೆ ನೀಡಿ ಎಂದ ಮಮತಾ
ವೈದ್ಯಕೀಯ ಸಲಕರಣೆ ದರ ರಚನೆ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುವುದರಿಂದ ಜಿಎಸ್ಟಿ ಹಾಗೂ ಕಸ್ಟಮ್ ಸುಂಕದ ಮೇಲೆ ವಿನಾಯಿತಿ ನೀಡಬಹುದು ಎಂದು ನಾನು ವಿನಂತಿಸುತ್ತೇನೆ. ಕೋವಿಡ್ ಸಾಂಕ್ರಾಮಿಕ ರೋಗದ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಲು ನಮಗೆ ಸಹಕರಿಸಬೇಕು ಎಂದು ಸಿಎಂ ಮಮತಾ ಮನವಿ ಮಾಡಿದ್ದಾರೆ.