ಇಟಾವಾ (ಉತ್ತರಪ್ರದೇಶ) : ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆ ಕುಟುಂಬ ಸದಸ್ಯರ ಕೋರಿಕೆಯಂತೆ ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ತಮ್ಮ ಊರು ಸೈಫೈಗೆ ತೆರಳಿ ಮತ ಚಲಾಯಿಸಲಿಲ್ಲ.
ಕುಟುಂಬದ ಮೂಲಗಳ ಪ್ರಕಾರ, 81 ವರ್ಷದ ಮುಲಾಯಂ ಸಿಂಗ್ ಯಾದವ್ ಈವರೆಗೆ ಯಾವುದೇ ಚುನಾವಣೆಯಲ್ಲಿ ಮತದಾನ ತಪ್ಪಿಸಿರಲಿಲ್ಲ. "ಕೋವಿಡ್-19 ಸಾಂಕ್ರಾಮಿಕ ಹಿನ್ನೆಲೆ ಪಂಚಾಯತ್ ಚುನಾವಣೆಗೆ ಈ ಬಾರಿ ಮತ ಚಲಾಯಿಸಲು ಸೈಫೈಗೆ ಬರಬಾರದೆಂದು ನಾವು ನೇತಾಜಿ (ಮುಲಾಯಂ ಸಿಂಗ್ ಯಾದವ್) ಅವರನ್ನು ವಿನಂತಿಸಿದ್ದೇವೆ.
ಈಗಾಗಲೇ ಅವರು ನಮ್ಮ ಮನವಿಗೆ ಒಪ್ಪಿದರು. ಪ್ರಸ್ತುತ ನೇತಾಜಿ ದೆಹಲಿಯಲ್ಲಿದ್ದಾರೆ" ಎಂದು ಮುಲಾಯಂ ಸಿಂಗ್ ಯಾದವ್ ಅವರ ಸೋದರಳಿಯ ಧರ್ಮೇಂದ್ರ ಯಾದವ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಉತ್ತರಪ್ರದೇಶದ ಪಂಚಾಯತ್ ಚುನಾವಣೆಯ ಎರಡನೇ ಹಂತದ ಮತದಾನ ಇಂದು ನಡೆದಿದ್ದು, 20 ಜಿಲ್ಲೆಗಳಲ್ಲಿ 2.23 ಲಕ್ಷಕ್ಕೂ ಹೆಚ್ಚು ಹುದ್ದೆಗಳಿಗೆ 3.48 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದರು.