ಹೈದರಾಬಾದ್ : ಭಾರತ್ ಬಯೋಟೆಕ್ ತನ್ನ ಕೋವಿಡ್-19 ಲಸಿಕೆ 'ಕೋವ್ಯಾಕ್ಸಿನ್'ನ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಕ್ಕಾಗಿ ಈವರೆಗೆ 23,000 ಸ್ವಯಂಸೇವಕರನ್ನು ನೇಮಿಸಿದೆ.
ಕೋವ್ಯಾಕ್ಸಿನ್‌ನ ಮೊದಲನೇ ಮತ್ತು ಎರಡನೇ ಹಂತದ ಕ್ಲಿನಿಕಲ್ ಪ್ರಯೋಗಗಳಲ್ಲಿ ಸುಮಾರು 1,000 ವಿಷಯಗಳ ಮೌಲ್ಯಮಾಪನ ಮಾಡಲಾಗಿದೆ. ಇದೀಗ 'ಕೋವ್ಯಾಕ್ಸಿನ್'ನ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಕ್ಕೆ 23,000 ಸ್ವಯಂಸೇವಕರನ್ನು ನೇಮಿಸಿಕೊಳ್ಳಲಾಗಿದೆ.
ಭಾರತ್ ಬಯೋಟೆಕ್ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಕೋವಿಡ್-19 ಲಸಿಕೆಯನ್ನು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್‌ಐವಿ) ಸಹಯೋಗದೊಂದಿಗೆ ಬಿಎಸ್‌ಎಲ್-3 (ಬಯೋ-ಸೇಫ್ಟಿ ಲೆವೆಲ್-3) ಬಯೋ ಕಂಟೈನ್‌ಮೆಂಟ್ ಸೌಲಭ್ಯದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ.
ಮೊದಲ ಮತ್ತು ಎರಡನೇ ಹಂತದ ಕ್ಲಿನಿಕಲ್ ಪ್ರಯೋಗಗಳಲ್ಲಿ ಸುರಕ್ಷತೆ ಮತ್ತು ಇಮ್ಯುನೊಜೆನೆಸಿಟಿ ಫಲಿತಾಂಶಗಳು ಉತ್ತಮವಾಗಿ ಕಂಡುಬಂದ ಕಾರಣ ಕೋವ್ಯಾಕ್ಸಿನ್‌ನ 3ನೇ ಹಂತದ ಮಾನವ ಕ್ಲಿನಿಕಲ್ ಪ್ರಯೋಗಗಳು ನವೆಂಬರ್ ಮಧ್ಯಭಾಗದಲ್ಲಿ ಪ್ರಾರಂಭವಾಗಿದೆ.
ಇದೀಗ 'ಕೋವ್ಯಾಕ್ಸಿನ್'ನ 3ನೇ ಹಂತದ ಕ್ಲಿನಿಕಲ್ ಪ್ರಯೋಗಗಳಿಗೆ ದೇಶದ ವಿವಿಧ ಭಾಗಗಳಿಂದ 26,000 ಜನರನ್ನು ಸೇರಿಸಿಕೊಳ್ಳುವ ಗುರಿ ಹೊಂದಲಾಗಿದೆ. ಈವರೆಗೆ 23,000 ಸ್ವಯಂಸೇವಕರನ್ನು ನೇಮಿಸಿಕೊಳ್ಳಲಾಗಿದೆ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.
ಇನ್ನು, ಈ ಪ್ರಯೋಗದಲ್ಲಿ ಭಾಗವಹಿಸಲು ಮುಂದಾದ ಪ್ರತಿಯೊಬ್ಬ ಸ್ವಯಂಸೇವಕರಿಗೆ ಭಾರತ್ ಬಯೋಟೆಕ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಸುಚಿತ್ರ ಎಲಾ ಧನ್ಯವಾದ ತಿಳಿಸಿದ್ದಾರೆ.