ನವದೆಹಲಿ:ಕೋವಿಡ್ ನಿರ್ವಹಣೆಗೆ ಮತ್ತು ಕೋವಿಡ್ ಸಂಕಷ್ಟದಿಂದ ಪಾರು ಮಾಡಲು ಕೋವ್ಯಾಕ್ಸಿನ್ ತಯಾರಿಸಿ, ದೇಶದ ಜನರಿಗೆ ಸರಬರಾಜು ಮಾಡಿ ಗಮನ ಸೆಳೆದಿರುವ ಹೈದರಾಬಾದ್ನ ಭಾರತ್ ಬಯೋಟೆಕ್ಗೆ ದೇಶದ ಹೆಮ್ಮೆಯ ಪದ್ಮ ಪುರಸ್ಕಾರ ದೊರೆತಿದೆ. ಕಂಪನಿಯ ಗಮನಾರ್ಹ ಸಾಧನೆಯನ್ನ ಗುರುತಿಸಿ ಭಾರತ ಸರ್ಕಾರ ಭಾರತ್ ಬಯೋಟೆಕ್ನ ಎಂ ಡಿ ಕೃಷ್ಣ ಎಲ್ಲ ಹಾಗೂ ಜಂಟಿ ಎಂ ಡಿ ಸುಚಿತ್ರಾ ಎಲ್ಲ ಅವರಿಗೆ ಪದ್ಮ ಪುರಸ್ಕಾರ ನೀಡಿ ಗೌರವಿಸಿದೆ.
ಸೋಮವಾರ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಪಾಲ್ಗೊಂಡ ಕೃಷ್ಣ ಹಾಗೂ ಸುಚಿತ್ರ ಎಲ್ಲ ರಾಷ್ಟ್ರಪತಿಗಳಿಂದ ಪದ್ಮ ಪುರಸ್ಕಾರ ಸ್ವೀಕರಿಸಿದರು. ವೈದ್ಯಕೀಯ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಈ ಪುರಸ್ಕಾರ ನೀಡಲಾಗಿದೆ.
ಪದ್ಮ ಪ್ರಶಸ್ತಿ ಭಾರತದ ಅತ್ಯುನ್ನತ ಪ್ರಶಸ್ತಿಗಳಲ್ಲೊಂದಾಗಿದೆ. ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ. ಪ್ರಶಸ್ತಿಗಳನ್ನು ವಿವಿಧ ವಿಭಾಗಗಳಲ್ಲಿ ನೀಡಲಾಗುತ್ತಿದೆ. ಅಂದರೆ ಕಲೆ, ಸಮಾಜಕಾರ್ಯ, ಸಾರ್ವಜನಿಕ ವ್ಯವಹಾರಗಳು, ವಿಜ್ಞಾನ ಮತ್ತು ಇಂಜಿನಿಯರಿಂಗ್, ವ್ಯಾಪಾರ ಮತ್ತು ಕೈಗಾರಿಕೆ, ವೈದ್ಯಕೀಯ, ಸಾಹಿತ್ಯ ಮತ್ತು ಶಿಕ್ಷಣ, ಕ್ರೀಡೆ, ನಾಗರಿಕ ಸೇವೆಗಳಲ್ಲಿ ನೀಡುವ ಗಣನೀಯ ಸೇವೆಗಳನ್ನು ಗುರುತಿಸಿ ಈ ಪುರಸ್ಕಾರ ನೀಡಲಾಗುತ್ತದೆ.
'ಪದ್ಮ ವಿಭೂಷಣ' ಅಸಾಧಾರಣ ಮತ್ತು ವಿಶಿಷ್ಟ ಸೇವೆಗಾಗಿ ನೀಡಲಾಗುತ್ತಿದ್ದರೆ, ಉನ್ನತ ಶ್ರೇಣಿಯ ವಿಶಿಷ್ಟ ಸೇವೆಗಾಗಿ 'ಪದ್ಮಭೂಷಣ' ಮತ್ತು ಯಾವುದೇ ಕ್ಷೇತ್ರದಲ್ಲಿ ವಿಶಿಷ್ಟ ಸೇವೆಗಾಗಿ 'ಪದ್ಮಶ್ರೀ' ಪುರಸ್ಕಾರ ನೀಡಿ ಸನ್ಮಾನಿಸಲಾಗುತ್ತದೆ. ಪ್ರತಿ ವರ್ಷ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಈ ಪ್ರಶಸ್ತಿಗಳನ್ನು ಘೋಷಿಸಲಾಗುತ್ತದೆ.
ಈ ಪುರಸ್ಕಾರಗಳನ್ನು ಸಾಮಾನ್ಯವಾಗಿ ಪ್ರತಿ ವರ್ಷ ಮಾರ್ಚ್/ಏಪ್ರಿಲ್‌ನಲ್ಲಿ ರಾಷ್ಟ್ರಪತಿ ಭವನದಲ್ಲಿ ನಡೆಯುವ ಸಮಾರಂಭಗಳಲ್ಲಿ ರಾಷ್ಟ್ರಪತಿಗಳಿಂದ ನೀಡಲಾಗುತ್ತದೆ. ಈ ವರ್ಷ ಎರಡು ಜೋಡಿ ಪ್ರಕರಣಗಳು ಸೇರಿದಂತೆ 128 ಪದ್ಮ ಪ್ರಶಸ್ತಿಗಳನ್ನು ರಾಷ್ಟ್ರಪತಿಗಳು ಪ್ರದಾನ ಮಾಡಿದರು.
ರಾಷ್ಟ್ರಪತಿ ಭವನದಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ 2022 ನೇ ಸಾಲಿನ ಎರಡು ಪದ್ಮವಿಭೂಷಣ, ಒಂಬತ್ತು ಪದ್ಮಭೂಷಣ ಮತ್ತು ಐವತ್ನಾಲ್ಕು ಪದ್ಮಶ್ರೀ ಪ್ರಶಸ್ತಿಗಳನ್ನು ವಿವಿಧ ಸಾಧಕರಿಗೆ ನೀಡಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಪ್ರದಾನ ಮಾಡಿದರು.
ಇದನ್ನು ಓದಿ:ಓದಿದ್ದು 10ನೇ ತರಗತಿ, ಹಲವು ಕೃಷಿ ಸಾಧನಗಳ ಆವಿಷ್ಕಾರ!: ಧಾರವಾಡದ ರೈತ ಅಬ್ದುಲ್ ಖಾದರ್‌ಗೆ 'ಪದ್ಮಶ್ರಿ'