ನವದೆಹಲಿ: ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಮಕ್ಕಳಿಗೆ ಲಭ್ಯವಿರುವ ಏಕೈಕ ಕೋವಿಡ್-19 ಲಸಿಕೆಯಾಗಿದ್ದು, 15-18 ವರ್ಷ ವಯಸ್ಸಿನವರಿಗೆ ಜ.3 ರಿಂದ ಲಸಿಕೆ ನೀಡಲಾಗುವುದು ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಅಲ್ಲದೇ, ಆರೋಗ್ಯ ಮತ್ತು ಮುಂಚೂಣಿಯ ಕಾರ್ಯಕರ್ತರು ಹಾಗೂ ವಯೋಸಹಜ ಇತರೆ ಖಾಯಿಲೆಗಳಿಂದ ಬಳಲುತ್ತಿರುವ 60 ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರಿಗೆ ಮೊದಲು ನೀಡಿದ ಲಸಿಕೆಯನ್ನೇ 3ನೇ ಡೋಸ್ ಆಗಿ ನೀಡಲಾಗುತ್ತದೆ.
ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ರಾತ್ರಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿ, 15-18 ವರ್ಷದೊಳಗಿನ ಮಕ್ಕಳಿಗೆ ಜ.3 ರಿಂದ ಕೋವಿಡ್ ಲಸಿಕೆ ನೀಡಲಾಗುವುದು ಎಂದು ಘೋಷಿಸಿದ್ದರು. ಅಲ್ಲದೇ, ಆರೋಗ್ಯ ಮತ್ತು ಮುಂಚೂಣಿಯ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ನೀಡಲಾಗುವುದು ಎಂದು ಪ್ರಕಟಿಸಿದ್ದರು.
ದೇಶದಲ್ಲಿ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ವೈದ್ಯರ ಸಲಹೆಯ ಮೇರೆಗೆ ಜ. 10ರಿಂದ 60 ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರಿಗೆ ಮತ್ತು ಆರೋಗ್ಯ ಮತ್ತು ಮುಂಚೂಣಿಯ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ನೀಡಲಾಗುತ್ತದೆ ಎಂದು ಪ್ರಧಾನಿ ಹೇಳಿದ್ದಾರೆ.
ಹೊಸ ವ್ಯಾಕ್ಸಿನೇಷನ್ ವರ್ಗವನ್ನು (15-18 ವರ್ಷ) ನೋಂದಾಯಿಸಲು ಕೋವಿನ್ ಪೋರ್ಟಲ್‌ನಲ್ಲಿ ಅಗತ್ಯ ಮಾರ್ಪಾಡುಗಳನ್ನು ಮಾಡಲಾಗುತ್ತಿದೆ. ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ಶುಕ್ರವಾರ ಕೆಲವು ಷರತ್ತುಗಳೊಂದಿಗೆ 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಕೋವ್ಯಾಕ್ಸಿನ್ಗೆ ತುರ್ತು ಬಳಕೆಯ ಒಪ್ಪಿಗೆ ನೀಡಿದೆ.
ಭಾರತದ ವಯಸ್ಕ ಜನಸಂಖ್ಯೆಯ ಶೇ. 61ಕ್ಕಿಂತ ಹೆಚ್ಚು ಜನರು ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದಿದ್ದಾರೆ. ಅಂತೆಯೇ, ವಯಸ್ಕ ಜನಸಂಖ್ಯೆಯ ಸುಮಾರು 90 ಪ್ರತಿಶತದಷ್ಟು ಜನರು ಕೋವಿಡ್ ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ.
ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ದೇಶದಲ್ಲಿ ಈವರೆಗೆ 141 ಕೋಟಿಗೂ ಅಧಿಕ ವ್ಯಾಕ್ಸಿನ್ ನೀಡಲಾಗಿದೆ. ಕೋವಾಕ್ಸಿನ್‌ನ 4 ರಿಂದ 5 ಕೋಟಿ ಲಸಿಕೆ ಡೋಸ್‌ಗಳ ದಾಸ್ತಾನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಭ್ಯವಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಬುರ್ಕಿನಾ ಫಾಸೊದಲ್ಲಿ ಇಸ್ಲಾಮಿಕ್ ತೀವ್ರವಾದಿಗಳ ದಾಳಿಗೆ 41 ಮಂದಿ ಬಲಿ