ನವದೆಹಲಿ: ಮುಸ್ಲಿಮರು, ಜೈನರು, ಪಾರ್ಸಿಗಳಂತೆ ತಮ್ಮ ಧಾರ್ಮಿಕ ಸ್ಥಳಗಳನ್ನು ಸ್ಥಾಪಿಸುವ, ನಿರ್ವಹಿಸುವ ಹಕ್ಕನ್ನು ಹಿಂದುಗಳಿಗೂ ನೀಡಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಬುಧವಾರ ತಿರಸ್ಕರಿಸಿದೆ. ಇದು ಶಾಸಕಾಂಗದ ವಿಚಾರವಾಗಿದ್ದು, ಅದರಲ್ಲಿ ನ್ಯಾಯಾಂಗ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಮೂರ್ತಿಗಳಾದ ಜೆ.ಬಿ.ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು, ವಕೀಲ ಅಶ್ವಿನಿ ಉಪಾಧ್ಯಾಯ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡಿತು. ಧಾರ್ಮಿಕ ಕ್ಷೇತ್ರಗಳ ವಿಚಾರದಲ್ಲಿ ನ್ಯಾಯಾಂಗ ನೇರವಾಗಿ ಮಧ್ಯಪ್ರವೇಶ ಮಾಡಲು ಸಾಧ್ಯವಿಲ್ಲ. ಇದನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಎಂದು ಪರಿಗಣನೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿತು.
ವಕೀಲ ಅಶ್ವಿನಿ ಉಪಾಧ್ಯಾಯ ಅವರಿಗೆ ಬುದ್ಧಿವಾದ ಹೇಳಿದ ಕೋರ್ಟ್, ಇಂತಹ ಅರ್ಜಿಯನ್ನು ಸಲ್ಲಿಸುವ ಮೊದಲು ಯೋಚಿಸಬೇಕು. ಹಾಗೊಂದು ವೇಳೆ ನಿಮಗೆ ಈ ಬಗ್ಗೆ ಪರಿಹಾರ ಬೇಕಾದಲ್ಲಿ ಈ ಮನವಿಯನ್ನು ನೀವು ಸಂಸತ್ತು ಅಥವಾ ಕೇಂದ್ರ ಸರ್ಕಾರದ ಮುಂದೆ ಸಲ್ಲಿಸಿ ಎಂದು ಸಲಹೆ ನೀಡಿತು.
ದೇವಾಲಯಗಳು ಮಾತ್ರ ಸರ್ಕಾರದ ಸುಪರ್ದಿಗೆ: ದೇಶದಲ್ಲಿ ಹಿಂದು ದೇವಾಲಯಗಳು ಮಾತ್ರ ಸರ್ಕಾರದ ಸುಪರ್ದಿಯಲ್ಲಿವೆ. ಉಳಿದಂತೆ ಮಸೀದಿ, ಚರ್ಚ್ಗಳು ಕಾನೂನು ವ್ಯಾಪ್ತಿಯಲ್ಲಿ ಇಲ್ಲ. ಇಲ್ಲಿನ ಕಲ್ಕಾ ದೇವಸ್ಥಾನವು ಸರ್ಕಾರದ ನಿಯಂತ್ರಣದಲ್ಲಿದೆ. ಜಾಮಾ ಮಸೀದಿಯು ಸರ್ಕಾರಕ್ಕೆ ಸೇರಿಲ್ಲ. ಒಟ್ಟು 4 ಲಕ್ಷ ದೇವಾಲಯಗಳನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿದೆ. ಹೀಗಾಗಿ ಆಯಾ ಸಮುದಾಯದ ಜನರೇ ದೇವಸ್ಥಾನಗಳನ್ನು ನಿರ್ವಹಿಸಬಾರದೇಕೆ ಎಂದು ಅರ್ಜಿದಾರ ವಕೀಲ ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕೋರ್ಟ್, ಹಿಂದೂಗಳು, ಜೈನರು, ಬೌದ್ಧರು ಮತ್ತು ಸಿಖ್ಖರು ತಮ್ಮ ಧಾರ್ಮಿಕ ಸ್ಥಳಗಳನ್ನು ಸ್ಥಾಪಿಸಲು ಮತ್ತು ನಿರ್ವಹಿಸಲು ಸಮಾನ ಹಕ್ಕುಗಳನ್ನು ಹೊಂದಿದ್ದಾರೆ. ಸಂವಿಧಾನದ 26 ನೇ ವಿಧಿಯ ಅಡಿಯಲ್ಲಿ ಅವರಿಗೆ ಈ ಹಕ್ಕಿದೆ. ಪ್ರತಿ ಧಾರ್ಮಿಕ ಹಕ್ಕನ್ನು ಸಂವಿಧಾನವು 25 ನೇ ವಿಧಿಯ ಅಡಿಯಲ್ಲಿ ನೀಡಿದೆ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು.
ಇದು ನೀತಿ ನಿರೂಪಣೆಯ ವಿಷಯವಾಗಿದೆ. ನಾವು ಧಾರ್ಮಿಕ ಸ್ಥಳಗಳ ವಿಷಯದಲ್ಲಿ ಹೀಗೆ ಮಾಡಿ ಎಂದು ಸರ್ಕಾರಕ್ಕೆ ನಿರ್ದೇಶಿಸಲು ಬರುವುದಿಲ್ಲ. ಇದೆಲ್ಲೂ ಶಾಸಕಾಂಗದ ಅಧಿಕಾರವಾಗಿದೆ. ಮಾಧ್ಯಮಗಳಲ್ಲಿ ಸುದ್ದಿಯಾಗಲು ಇಂತಹ ಅರ್ಜಿಯನ್ನು ಸಲ್ಲಿಸುವುದು ಸರಿಯಲ್ಲ. ಕೋರ್ಟ್ನ ಸಮಯ ಎಷ್ಟು ಮುಖ್ಯವಾದುದು ಎಂಬುದು ವಕೀಲರಾದ ನಿಮಗೆ ತಿಳಿದಿರಲಿ ಎಂದು ತಿಳಿ ಹೇಳಿದಾಗ, ವಕೀಲ ಅಶ್ವಿನಿ ಉಪಾಧ್ಯಾಯ ಅರ್ಜಿ ಹಿಂಪಡೆಯಲು ಒಪ್ಪಿಕೊಂಡರು.
ಇದನ್ನೂ ಓದಿ: ಹಬ್ಬದ ಭರ್ಜರಿ ಗಿಫ್ಟ್.. ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಹೆಚ್ಚಳ: ಜುಲೈ 1ರಿಂದಲೇ ಪೂರ್ವಾನ್ವಯ