ಪ್ರತಾಪ್‌ಗಢ, ಉತ್ತರಪ್ರದೇಶ: 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಪ್ರಕರಣದಲ್ಲಿ ಆರೋಪಿಗೆ ಕೇವಲ 10 ದಿನದಲ್ಲಿ ವಿಚಾರಣೆ ನಡೆಸಿದ ಉತ್ತರಪ್ರದೇಶದ ಪೋಕ್ಸೋ ಕೋರ್ಟ್, ಅಪರಾಧಿ ಎಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿದೆ. ಅಲ್ಲದೇ, 20 ಸಾವಿರ ದಂಡ ವಿಧಿಸಿದೆ.
ಮಗುವಿನ ಮೇಲೆ ಹೇಯ ಕೃತ್ಯ ಎಸಗಿದ್ದ ಭೂಪೇಂದ್ರ ಸಿಂಗ್ಗೆ ಪೋಕ್ಸೋ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಪಂಕಜ್ ಕುಮಾರ್ ಶ್ರೀವಾಸ್ತವ ಕಠಿಣ ಶಿಕ್ಷೆಯನ್ನು ವಿಧಿಸಿದ್ದಾರೆ. ಸರ್ಕಾರಿ ವಕೀಲ ದೇವೇಶ್ ಚಂದ್ರ ತ್ರಿಪಾಠಿ ಪ್ರಕರಣದಲ್ಲಿ ವಾದಿಸಿದ್ದರು.
ಘಟನೆ ಏನು?: ಪ್ರತಾಪ್ಗಢದ ಕೊತ್ವಾಲಿಯಲ್ಲಿ 6 ವರ್ಷದ ಬಾಲಕಿಯ ಮೇಲೆ ಅಪರಾಧಿ ಭೂಪೇಂದ್ರ ಸಿಂಗ್ ಆಗಸ್ಟ್ 12 ರಂದು ಅತ್ಯಾಚಾರ ಎಸಗಿದ್ದ. ಗ್ರಾಮಸ್ಥರು ಆತನನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದರು. ಆಗಸ್ಟ್ 13 ರಂದು ಕೊತ್ವಾಲಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಸೆಪ್ಟೆಂಬರ್ 3 ರಂದು ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಅಂದೇ ಕೋರ್ಟ್ ಚಾರ್ಜ್ಶೀಟ್ ಅನ್ನು ಪರಿಗಣಿಸಿತು.
ಸೆಪ್ಟೆಂಬರ್ 12 ರಂದು ನ್ಯಾಯಾಲಯದಲ್ಲಿ ವಿಚಾರಣೆ ಪ್ರಾರಂಭವಾಗಿ, 16ರ ವರೆಗೆ ಪ್ರಕರಣದಲ್ಲಿ 8 ಸಾಕ್ಷಿಗಳು ಸಾಕ್ಷಿ ಹೇಳಿದ್ದರು. ಸೆ.17ರಂದು ಆರೋಪಿ ಭೂಪೇಂದ್ರನ ಹೇಳಿಕೆಯನ್ನು ನ್ಯಾಯಾಲಯದಲ್ಲಿ ದಾಖಲಿಸಿಕೊಳ್ಳಲಾಗಿತ್ತು. ಸೆಪ್ಟೆಂಬರ್ 20 ರಂದು ವಾದ ಮುಗಿದು, ಸೆಪ್ಟೆಂಬರ್ 21 ರಂದು ಭೂಪೇಂದ್ರ ಸಿಂಗ್ ದೋಷಿ ಎಂದು ತೀರ್ಪು ನೀಡಲಾಯಿತು. ಪೋಕ್ಸೊ ಕಾಯ್ದೆಯಡಿ ಅಪರಾಧಿಗೆ ಆಮರಣಾಂತ ಜೀವಾವಧಿ ಶಿಕ್ಷೆಯನ್ನು ವಿಧಿಸಿತು. ಪೋಕ್ಸೋ ವಿಶೇಷ ನ್ಯಾಯಾಧೀಶರ ಈ ತ್ವರಿಯ ನ್ಯಾಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಓದಿ: ಶಾಲಾ ಮಕ್ಕಳ ಬ್ಯಾಗ್ ತೂಕ ಇಳಿಸುವ ಕುರಿತು ಸರ್ಕಾರಕ್ಕೆ ನಿರ್ದೇಶನ ಕೋರಿ ಪಿಐಎಲ್