ಮಥುರಾ, ಉತ್ತರ ಪ್ರದೇಶ: ಉತ್ತರ ಪ್ರದೇಶದಲ್ಲಿ ರಾಮ ಜನ್ಮ ಭೂಮಿ ವಿವಾದ ನಂತರ ಶ್ರೀಕೃಷ್ಣ ಜನ್ಮಭೂಮಿ ವಿವಾದ ಮುನ್ನೆಲೆಗೆ ಬಂದಿದ್ದು, ಇಲ್ಲಿನ ಸಿವಿಲ್ ಕೋರ್ಟ್ ಈ ವಿವಾದಕ್ಕೆ ಸಂಬಂಧಿಸಿದ ದೂರೊಂದರ ತೀರ್ಪನ್ನು ಕಾಯ್ದಿರಿಸಿದೆ.
ಮಥುರಾದಲ್ಲಿ ಶ್ರೀಕೃಷ್ಣನ ಜನ್ಮಸ್ಥಾನವೆಂದೇ ಭಕ್ತರು ನಂಬಿರುವ ಸ್ಥಳದಲ್ಲಿ ಈದ್ಗಾ ಕಟ್ಟಡ ಸಂಕೀರ್ಣ ನಿರ್ಮಾಣವಾಗುತ್ತಿದ್ದು, ಈ ಕಾಮಗಾರಿಗೆ ತಡೆ ನೀಡಬೇಕೆಂದು ಯುನೈಟೆಡ್ ಹಿಂದೂ ಫ್ರಂಟ್ ಸಂಘಟನೆಯ ವಕೀಲ ಮಹೇಂದ್ರ ಪ್ರತಾಪ್ ಸಿಂಗ್ ಎಂಬುವವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ: ಗುಂಟೂರಿನಲ್ಲಿ ಡ್ರಾಪ್ ಕೊಡುವ ನೆಪದಲ್ಲಿ ಡಿಗ್ರಿ ವಿದ್ಯಾರ್ಥಿನಿ ಕತ್ತು ಹಿಸುಕಿ ಕೊಲೆ
ಇದಕ್ಕೂ ಮೊದಲು ವಕೀಲ ಮಹೇಂದ್ರ ಪ್ರತಾಪ್ ಸಿಂಗ್ 2020ರ ಡಿಸೆಂಬರ್ 23ರಂದು ಕೋರ್ಟ್ನಲ್ಲಿ ಶ್ರೀಕೃಷ್ಣಜನ್ಮಭೂಮಿಯ ಜಮೀನಿನ ಮಾಲೀಕತ್ವದ ಬಗ್ಗೆ ಅರ್ಜಿಯೊಂದನ್ನು ಸಲ್ಲಿಸಿದ್ದರು. ಈಗ ಈದ್ಗಾ ಕಟ್ಟಡ ಸಂಕೀರ್ಣ ನಿರ್ಮಾಣಕ್ಕೆ ತಡೆಯಾಜ್ಞೆ ನೀಡಬೇಕೆಂದು ವಕೀಲ ಮಹೇಂದ್ರ ಪ್ರತಾಪ್ ಸಿಂಗ್ ಅರ್ಜಿ ಸಲ್ಲಿಸಿದ್ದಾರೆ.
1951ರ ಫೆಬ್ರವರಿ 21ರಂದು ಶ್ರೀ ಕೃಷ್ಣ ಜನ್ಮ ಭೂಮಿ ಟ್ರಸ್ಟ್ ಸ್ಥಾಪನೆಯಾಗಿದ್ದು, 1968ರಲ್ಲಿ ಶ್ರೀ ಕೃಷ್ಣ ಜನ್ಮಸ್ಥಾನ ಸೇವಾ ಸಂಸ್ಥೆ ಮತ್ತು ಶಾಹಿ ಈದ್ಗಾ ನಿರ್ವಹಣಾ ಸಮಿತಿ ಮಾತುಕತೆ ನಡೆಸಿ, ಸ್ಥಳದಲ್ಲಿರುವ ಮಸೀದಿ ಅಲ್ಲಿಯೇ ಉಳಿಯುತ್ತದೆ ಎಂಬ ನಿರ್ಧಾರಕ್ಕೆ ಬರಲು ಒಪ್ಪಂದ ಮಾಡಿಕೊಳ್ಳಲಾಗಿತ್ತು.