ನಲ್ಗೊಂಡಾ (ತೆಲಂಗಾಣ): ಹೆಣ್ಣು ಮಗುವನ್ನು ಸರಿಯಾಗಿ ಪೋಷಿಸದೆ ಅದರ ಸಾವಿಗೆ ಕಾರಣರಾಗಿದ್ದ ಪೋಷಕರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಕೋರ್ಟ್ ಆದೇಶ ಹೊರಡಿಸಿದೆ.
ಇಲ್ಲಿನ ಜಿಲ್ಲಾ ಪ್ರಿನ್ಸಿಪಲ್ ಮತ್ತು ಸೆಷನ್ಸ್ ಕೋರ್ಟ್ ನ್ಯಾಯಾಧೀಶ ಎಂವಿ ರಮೇಶ್, ಹೆಣ್ಣು ಮಗುವಿಗೆ ವಿಷ ಹಾಕಿ ಸಾಯಿಸಿದ್ದ ಆರೋಪ ಸಾಬೀತಾದ ಹಿನ್ನೆಲೆ ಪೋಷಕರಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ನಲ್ಗೊಂಡಾ ಜಿಲ್ಲೆಯ ಪಾಪಳ್ಳಿ ಮಂಡಲ್ನ ರಾಮವತ್ ಜಯರಾಮ್ ಮತ್ತು ನಾಗಮಣಿ ದಂಪತಿ ಈ ಕೃತ್ಯ ಎಸಗಿದ್ದರು,
ಹೆಣ್ಣು ಮಗು ಹುಟ್ಟಿತೆಂದು ಅದರ ಪೋಷಣೆ ಹಾಗೂ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ. ಈ ಕುರಿತು ಸ್ಥಳೀಯ ಅಂಗನವಾಡಿ ಕಾರ್ಯಕರ್ತೆ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಳು. ಈ ದೂರಿನ ಮೇರೆಗೆ ದೇವರಕೊಂಡ ಕ್ಲಸ್ಟರ್ ಸಿಡಿಪಿಒ ಬುಕ್ಯ ಸುಕ್ಕುಭಾಯ್ ಮಗುವನ್ನು ರಕ್ಷಿಸಿ 2017ರಲ್ಲಿ ಅನಾಥಾಶ್ರಮಕ್ಕೆ ಸೇರಿಸಿದ್ದರು.
ಇದಾದ ಬಳಿಕ ಜಯರಾಮ್ ಮತ್ತು ನಾಗಮಣಿ ಅನಾಥಾಶ್ರಮಕ್ಕೆ ತೆರಳಿ ಮಗುವನ್ನು ಮರಳಿ ಕರೆತಂದಿದ್ದರು. 2017ರ ಫೆ. 4ರಂದು ಮಗು ಅನಾರೋಗ್ಯದಿಂದ ಮೃತಪಟ್ಟಿದೆ ಎಂದು ಹೇಳಿ ಅಂತ್ಯಕ್ರಿಯೆ ನಡೆಸಲು ಮುಂದಾಗಿದ್ದರು. ಆದರೆ ಐಸಿಡಿಎಸ್ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದು, ಈ ಹಿನ್ನೆಲೆ ಪೊಲೀಸರು ತನಿಖೆ ಆರಂಭಿಸಿದ್ದರು. ಬಳಿಕ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ವರದಿಯಲ್ಲಿ ಮಗು ವಿಷಪ್ರಾಶನದಿಂದ ಮೃತಪಟ್ಟಿದೆ ಎಂದು ಸಾಬೀತಾಯಿತು. ತನಿಖೆಯಲ್ಲಿ ಹಾಲಿನಲ್ಲಿ ವಿಷ ಬೆರಸಿ ಕುಡಿಸಿರುವುದಾಗಿ ಪೋಷಕರು ಒಪ್ಪಿಕೊಂಡಿದ್ದರು.
ಈ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ್ದ ಕೋರ್ಟ್ ಇದೀಗ ತೀರ್ಪು ಹೊರಡಿಸಿದೆ.
ಇದನ್ನೂ ಓದಿ: ಮನ ತೃಪ್ತಿಗಾಗಿ ಸುಮಾರು 50ಕ್ಕೂ ಹೆಚ್ಚು ಹುಡುಗಿಯರಿಂದ ಅಶ್ಲೀಲ ವಿಡಿಯೋ ಪಡೆದ ಬಾಲಕ!