ಕಣ್ಣೂರು(ಕೇರಳ): ದ್ವಿಚಕ್ರ ವಾಹನದಲ್ಲಿ ಕಾಲುವೆಗೆ ಬಿದ್ದು ಮೃತಪಟ್ಟ ವ್ಯಕ್ತಿಯೊಬ್ಬನ ಕುಟುಂಬಕ್ಕೆ ಕೇರಳದ ನ್ಯಾಯಾಲಯ ದಂಡ ವಿಧಿಸಿ ಅಚ್ಚರಿ ಮೂಡಿಸಿದೆ.
ಮಾರ್ಚ್ 8ರಂದು ಅಪಘಾತದಲ್ಲಿ ಸಾವನ್ನಪ್ಪಿದ್ದ ಭಾಸ್ಕರನ್ ಎಂಬವರು ಅಜಾಗರೂಕತೆಯಿಂದ ಚಾಲನೆ ಮಾಡಿ ಆ ಮೂಲಕ ಸಾವಿಗೆ ಕಾರಣರಾಗಿದ್ದಾರೆ ಎಂದು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ. ಈ ಅಪರಾಧವು ಐಪಿಸಿಯ ಸೆಕ್ಷನ್ 279 ಅಡಿಯಲ್ಲಿ ಶಿಕ್ಷಾರ್ಹ ಮತ್ತು ದಂಡವನ್ನು ನೇರವಾಗಿ ಅಥವಾ ವಕೀಲರ ಮೂಲಕ ಪಾವತಿಸಲು ಕೋರ್ಟ್ ಸೂಚಿಸಿದೆ.
ನ್ಯಾಯಾಲಯದಿಂದ ನೋಟಿಸ್ ಬಂದಾಗ ಭಾಸ್ಕರನ್ ಕುಟುಂಬ ಬೆಚ್ಚಿಬಿದ್ದಿದೆ. ಈ ವಿಚಿತ್ರ ಆದೇಶದಿಂದ ನೋವಾಗಿದೆ ಎಂದು ಭಾಸ್ಕರನ್ ಕುಟುಂಬ ಸದಸ್ಯರು ಹೇಳಿದ್ದಾರೆ.
ಎಫ್‌ಐಆರ್‌ನಲ್ಲಿ ಪೊಲೀಸರು ಮೊದಲು ಭಾಸ್ಕರನ್ ಸಾವನ್ನು ಅಸಹಜ ಸಾವು ಎಂದು ಶಂಕಿಸಿದ್ದರಂತೆ. ಪೊಲೀಸರು ಸೂಕ್ತ ತನಿಖೆ ನಡೆಸದೆ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಕುಟುಂಬಸ್ಥರು ಡಿಜಿಪಿ ಮತ್ತು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದರು. ಅಷ್ಟೇ ಅಲ್ಲ, ಭಾಸ್ಕರನ್ ಸಾವಿನ ನಂತರ ಪ್ರತಿಭಟನೆಗಳು ಸಹ ನಡೆದಿದ್ದವು. ಪಂಚಾಯತ್ ಸೂಚನೆ ಮೇರೆಗೆ ಪಿಡಬ್ಲ್ಯುಡಿ ರಸ್ತೆಗೆ ಬೇಲಿ ಹಾಕಿಸಿ ವಾಹನ ಸವಾರರು ಕಾಲುವೆಗೆ ಬೀಳದಂತೆ ರಕ್ಷಣೆ ಮಾಡಲಾಗಿತ್ತು. ಇಷ್ಟೆಲ್ಲಾ ಆದಮೇಲೂ ಈಗ ನ್ಯಾಯಾಲಯ ದಂಡ ವಿಧಿಸಿದ್ದು ಕುಟುಂಬಕ್ಕೆ ಬೇಸರ ಮೂಡಿಸಿದೆ.
ಇದನ್ನೂ ಓದಿ: ಸುಕೇಶ್ ಚಂದ್ರಶೇಖರ್ ಜೈಲು ವರ್ಗಾವಣೆ ಅರ್ಜಿ ವಿಚಾರಣೆ: ಇದೇನು ತುರ್ತು ವಿಷಯವಲ್ಲ ಎಂದ ಕೋರ್ಟ್