ತಿರುವನಂತಪುರಂ(ಕೇರಳ): ತಮಗಿರುವ ಸಾಲವನ್ನು ತೀರಿಸಲು ಎನ್ಆರ್ಐ ದಂಪತಿಯು ಮನೆಯನ್ನು ಲಾಟರಿ ಮೂಲಕ ಮಾರಾಟಕ್ಕಿಟ್ಟಿದ್ದರು. ಆದರೆ, ಇದು ಕಾನೂನುಬಾಹಿರವಾದ ಕಾರಣ ಸರ್ಕಾರ ಈ ಪ್ರಕ್ರಿಯೆಯನ್ನು ರದ್ದು ಮಾಡಲು ಆದೇಶಿಸಿದ್ದು, ಆ ದಂಪತಿಗೆ ನೋಟಿಸ್ ಜಾರಿ ಮಾಡಿದೆ.
ತಿರುವನಂತಪುರಂನ ವಟ್ಟಿಯುರ್ಕಾವು ನಿವಾಸಿಗಳಾದ ಅಣ್ಣಾ ಮತ್ತು ಜೋ ಮನೆಯನ್ನು ಲಾಟರಿ ಮೂಲಕ ಮಾರಾಟ ಮಾಡಲು ಮುಂದಾಗಿದ್ದರು. ಆದರೆ ಲಾಟರಿ ನಡೆಸುವುದಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ. ಅಲ್ಲದೇ, ಲಾಟರಿ ಪದ್ಧತಿ ನಿಷೇಧಿತವಾಗಿದೆ. ಇದನ್ನು ಸರ್ಕಾರ ಮಾತ್ರ ನಡೆಸಬಹುದಾಗಿದೆ. ಈ ಕಾರಣಕ್ಕಾಗಿ ಮನೆ ಮಾರಾಟವನ್ನು ನಿಲ್ಲಿಸುವಂತೆ ಎನ್ಆರ್ಐ ದಂಪತಿಗೆ ರಾಜ್ಯ ಲಾಟರಿ ಇಲಾಖೆ ನೋಟಿಸ್ ಜಾರಿ ಮಾಡಿದೆ.
ವಿದೇಶದಲ್ಲಿ ಕೆಲಸ ಮಾಡುತ್ತಿದ್ದ ದಂಪತಿ ಕೋವಿಡ್ ಬಳಿಕ ಸ್ವದೇಶಕ್ಕೆ ವಾಪಸಾಗಿ ಉದ್ಯಮ ನಡೆಸುತ್ತಿದ್ದರು. ಆದರೆ, ಕೋವಿಡ್ ಕಾರಣ ನಷ್ಟ ಅನುಭವಿಸಿದ್ದು, 34 ಲಕ್ಷ ರೂಪಾಯಿ ಸಾಲವಾಗಿತ್ತು. ಇದನ್ನು ತೀರಿಸಲು ತಮ್ಮ 1300 ಚದರಡಿಯ ಮನೆ, 3 ಸೆಂಟ್ಸ್ ಜಾಗವನ್ನು ಲಕ್ಕಿ ಡ್ರಾ ಮೂಲಕ ಮಾರಾಟಕ್ಕಿಟ್ಟಿದ್ದರು.
ಇದಕ್ಕಾಗಿ 3700 ಕೂಪನ್‌ಗಳನ್ನು ಮಾರಾಟ ಮಾಡಿ, ಇದರಿಂದ 74 ಲಕ್ಷ ರೂ.ಗಳನ್ನು ಸಂಗ್ರಹಿಸುವ ಆಲೋಚನೆ ಅವರದಾಗಿತ್ತು. ಒಂದು ಕೂಪನ್ಗೆ ತಲಾ 2000 ರೂ. ನಿಗದಿ ಮಾಡಿ, ಈಗಾಗಲೇ 200 ಕೂಪನ್‌ಗಳನ್ನು ಮಾರಾಟ ಮಾಡಿದ್ದರು. ಆದರೀಗ ಲಾಟರಿ ಇಲಾಖೆಯ ಸೂಚನೆಯಿಂದಾಗಿ ಮಾರಾಟವನ್ನು ನಿಲ್ಲಿಸಬೇಕಾಗಿದೆ.
ಓದಿ: ವಿಧಾನಸಭೆ ಗೇಟ್ನಲ್ಲಿ ಖಲಿಸ್ತಾನ್ ಧ್ವಜ ಹಾರಿಸಿದ್ದು ನಾವೇ: ಒಪ್ಪಿಕೊಂಡ SFJಯಿಂದ ವಿಡಿಯೋ!