ಮಧುರೈ(ತಮಿಳುನಾಡು) : ಕೊರೊನಾ ಸಾಂಕ್ರಾಮಿಕದ ದೃಷ್ಟಿಯಿಂದ, ಅನೇಕ ರಾಜ್ಯಗಳು ಮತ್ತು ನಗರಗಳು ಕರ್ಫ್ಯೂ ಮತ್ತು ಸೀಮಿತ ವಿವಾಹ ಅತಿಥಿ ನಿರ್ಬಂಧಗಳನ್ನು ವಿಧಿಸಿವೆ. ಆದರೆ, ಮಧುರೈನ ಈ ವಧು-ವರರು ಆಕಾಶದಲ್ಲಿ ಹಾರಾಡುತ್ತಾ ಮದುವೆಯಾಗಿದ್ದಾರೆ.
ರಾಕೇಶ್ ಮತ್ತು ದಕ್ಷಿಣಾ ದಂಪತಿ ಮಧುರೈನಿಂದ ಬೆಂಗಳೂರಿನ ಪ್ರಯಾಣದ ನಡುವೆ ವಿಮಾನಯಾನ ಮಾಡುತ್ತಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಸಂಪೂರ್ಣ ವಿಮಾನವನ್ನು ಬುಕ್ ಮಾಡಿದ್ದು, 161 ಸಂಬಂಧಿಕರು ಈ ಸಮಾರಂಭದಲ್ಲಿ ಭಾಗಿಯಾಗಿದ್ದರು. ಕೊರೊನಾ ನೆಗೆಟಿವ್ ಪರೀಕ್ಷಾ ವರದಿಯ ಬಳಿಕವಷ್ಟೇ ಸಂಬಂಧಿಕರ ವಿಮಾನಯಾನಕ್ಕೆ ಅನುಮತಿಸಲಾಗಿತ್ತು. ಈ ವಿಶೇಷ ವಿವಾಹದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಇದಕ್ಕೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಅನೇಕ ಬಳಕೆದಾರರು ಕಾಮೆಂಟ್ ಮಾಡಿದ್ದು, ಈ ವಿವಾಹವು ಕೋವಿಡ್ -19 ಮುನ್ನೆಚ್ಚರಿಕೆ ಮಾನದಂಡಗಳ ಸ್ಪಷ್ಟ ಉಲ್ಲಂಘನೆಯೊಂದಿಗೆ ನಡೆದಿದೆ. ಹಾಗಾಗಿ, ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.