ಬಿಲಾಸ್ಪುರ್ (ಛತ್ತೀಸ್ಗಢ): ಬಿಲಾಸ್ಪುರ್ನ ಸೃಷ್ಟಿ ಎಂಬ 14 ತಿಂಗಳ ಹೆಣ್ಣು ಮಗು ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದು, ಕಂದಮ್ಮನ್ನನ ಉಳಿಸಲು ಬರೋಬ್ಬರಿ 22 ಕೋಟಿ ರೂ. ಹಣ ಬೇಕಿದೆ.
ಪುಟಾಣಿ ಸೃಷ್ಟಿ ಎದುರಿಸುತ್ತಿರುವುದು ಬೆನ್ನುಮೂಳೆಯ ಸ್ನಾಯು ಕ್ಷೀಣತೆ (ಎಸ್‌ಎಂಎ) ಸಮಸ್ಯೆ. ಎಸ್‌ಎಂಎ ಸಮಸ್ಯೆಯಿಂದ ಬಳಲುತ್ತಿರುವವರು ಸ್ನಾಯುಗಳನ್ನು ಜೀವಂತವಾಗಿಡುವ ಪ್ರೋಟೀನ್ ಅನ್ನು ಉತ್ಪಾದಿಸುವ ವಂಶವಾಹಿಯ ಕೊರತೆ ಅನುಭವಿಸುತ್ತಾರೆ. ಸ್ನಾಯುವಿನ ಮೇಲೆ ಸಂಪೂರ್ಣ ನಿಯಂತ್ರಣವನ್ನು ಕಳೆದುಕೊಳ್ಳುತ್ತಾರೆ.
ಈ ಕಾಯಿಲೆಗೆ ಚಿಕಿತ್ಸೆ ನೀಡಲು ಸ್ವಿಟ್ಜರ್‌ಲ್ಯಾಂಡ್‌ನ ನೊವಾರ್ಟಿಸ್ ಎಂಬ ಸಂಸ್ಥೆ ತಯಾರಿಸಿದ ಇಂಜೆಕ್ಷನ್ ಅನ್ನು ಆಮದು ಮಾಡಿಕೊಳ್ಳಬೇಕು. ಈ ಚುಚ್ಚುಮದ್ದಿನ ಬೆಲೆ 16 ಕೋಟಿ ರೂ. ಆಗಿದೆ. ಅಲ್ಲದೇ ಆಮದು ಸುಂಕವಾಗಿ 6.5 ಕೋಟಿ ರೂ. ವಿಧಿಸಲಾಗುತ್ತದೆ.
ಇದನ್ನೂ ಓದಿ: 2021ರ ಜನಗಣತಿ ದೇಶದ ಮೊದಲ ಡಿಜಿಟಲ್ ಜನಗಣತಿ: ನೀತಿ ಆಯೋಗ
ಮೂಲತಃ ಜಾರ್ಖಂಡ್ನವರಾದ ಮಗುವಿನ ತಂದೆ ಛತ್ತೀಸ್ಗಢ ಕೊರ್ಬಾ ಜಿಲ್ಲೆಯಲ್ಲಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಾರೆ. ಇಷ್ಟೊಂದು ದೊಡ್ಡ ಮೊತ್ತದ ಹಣ ಹೊಂದಿಸಲಾಗದೆ ಪರದಾಡುತ್ತಿದ್ದಾರೆ. ಚಿಕಿತ್ಸೆಯ ವೆಚ್ಚವನ್ನು ಕ್ರೌಡ್ ಫಂಡಿಂಗ್ ಮೂಲಕ ಸಂಗ್ರಹಿಸಲು ಇದೀಗ ಮುಂದಾಗಿದ್ದು, ನೆರವಿನ ಹಸ್ತ ಬೇಡಿದ್ದಾರೆ.
ಕ್ರೌಡ್ ಫಂಡಿಂಗ್ ಎಂದರೇನು?
ಕ್ರೌಡ್ ಫಂಡಿಂಗ್ ಎನ್ನುವುದು ಜನರ ಸಹಾಯದೊಂದಿಗೆ ಹಣವನ್ನು ಸಂಗ್ರಹಿಸುವ ಹೊಸ ತಂತ್ರವಾಗಿದೆ. ಆನ್‌ಲೈನ್ ಪ್ಲಾಟ್‌ಫಾರ್ಮ್, ಸಾಮಾಜಿಕ ಜಾಲತಾಣಗಳ ಮೂಲಕ ಪ್ರಪಂಚದ ಯಾವುದೇ ಭಾಗದಲ್ಲಿ ವಾಸಿಸುವ ಜನರು ಅಗತ್ಯವಿರುವವರಿಗೆ ತಮ್ಮ ಬ್ಯಾಂಕ್ ಅಕೌಂಟ್ ಮೂಲಕ ಹಣವನ್ನು ಕಳುಹಿಸಬಹುದಾಗಿದೆ.