ಶ್ರೀಕಾಕುಳಂ/ಆಂಧ್ರಪ್ರದೇಶ:ಪ್ರೀತಿಸಿ ಮದುವೆಯಾದ ಜೋಡಿ ದಾಂಪತ್ಯಕ್ಕೆ ಕಾಲಿಟ್ಟು ಒಂದೂವರೆ ತಿಂಗಳು ಕಳೆಯುವ ಮುನ್ನವೇ ಆತ್ಮಹತ್ಯೆ ಮಾಡಿಕೊಂಡ ಘಟನೆ ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ತುನಿವಾಡ ಗ್ರಾಮದಲ್ಲಿ ನಡೆದಿದೆ.
ಪಾಲಿ ಹರೀಶ್ (29) ಮತ್ತು ರುಂಕು ದಿವ್ಯಾ (20) ಆತ್ಮಹತ್ಯೆ ಮಾಡಿಕೊಂಡವರು. ಎಂಸಿಎ ಮಾಡಿದ್ದ ಹರೀಶ್ ಸರ್ಕಾರಿ ನೌಕರಿ ಪಡೆಯುವ ಆಸೆಯಿಂದ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ. ಅದಕ್ಕಾಗಿ ವಿಶಾಖಪಟ್ಟಣದಲ್ಲಿ ತರಬೇತಿ ಪಡೆಯುತ್ತಿದ್ದ. ದಿವ್ಯಾ ಅಂತಿಮ ವರ್ಷದ ಪದವಿ ಪರೀಕ್ಷೆ ಬರೆದಿದ್ದಳು. ಇಬ್ಬರೂ ಕೆಲ ಸಮಯದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಮದುವೆಗೆ ಮನೆಯವರು ಒಪ್ಪುವುದಿಲ್ಲ ಎಂಬುದನ್ನು ಮನಗಂಡು ಮನೆ ಬಿಟ್ಟು ಹೋಗಿ ಸ್ನೇಹಿತರ ಸಮ್ಮುಖದಲ್ಲಿ ಅಣ್ಣಾವರಂ ದೇವಾಲಯದಲ್ಲಿ ವಿವಾಹ ಮಾಡಿಕೊಂಡಿದ್ದರು.
ಮದುವೆಯಾದ ಬಳಿಕ ಹುಟ್ಟೂರಿಗೆ ತೆರಳದೇ ಈ ದಂಪತಿ ವಿಶಾಖಪಟ್ಟಣದಲ್ಲಿ ವಾಸವಿದ್ದರು. ಆದರೆ, ದಿನಕಳೆದಂತೆ ಮನಸು ಮನೆಯವರೆಗಡೆಗೆ ವಾಲಿತು. ಹೀಗಾಗಿ ಮದುವೆಯಾದ 50 ದಿನಗಳ ಬಳಿಕ ಹರೀಶ್ ತನ್ನ ಮಡದಿಯನ್ನು ಕರೆದುಕೊಂಡು ತುನಿವಾಡ ಗ್ರಾಮಕ್ಕೆ ಬಂದ. ತಾಯಿಯ ಕಾಲಿಗೆ ಬಿದ್ದು, ನನ್ನನ್ನು ಕ್ಷಮಿಸು ಅಮ್ಮ, ತಪ್ಪು ಮಾಡಿಬಿಟ್ಟೆ ಎಂದು ಕ್ಷಮೆಯಾಚಿಸಿದ.
ಎಷ್ಟಾದರೂ ಹೆತ್ತ ಕರುಳಲ್ಲವೇ, ಅಲ್ಲದೇ ತಂದೆ ಇಲ್ಲದ ಮಗನನ್ನ ಕಷ್ಟಪಟ್ಟು ಸಾಕಿ ಮುದ್ದಿಸಿ ಬೆಳೆಸಿದರು. ಹೀಗಾಗಿ ಅವನ ತಾಯಿ ಇರಲಿ ಬಿಡು ಮಗನೇ ಎಂದು ಕ್ಷಮಿಸಿ ಅವನನ್ನು ತಬ್ಬಿಕೊಂಡು ಹಣೆಗೊಂದು ಮುತ್ತಿಟ್ಟು ಚಿಂತಿಸಬೇಡ ಎಂದು ಹೇಳಿ ಆಶೀರ್ವಾದ ಮಾಡಿದರು. ಅದಾದ ಬಳಿಕ ಪಾಲಿ ಹರೀಶ್ ಹಾಗೂ ದಿವ್ಯಾ ರೂಮಿಗೆ ಹೋದರು. ಆದರೆ, ಏನಾಯ್ತೋ ಏನೋ ಕೆಲ ಹೊತ್ತಿನ ಬಳಿಕ ನೋಡಿದರೆ ಇಬ್ಬರೂ ರೂಮಿನ ಫ್ಯಾನ್ಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ.
ಸ್ಥಳಕ್ಕೆ ಪಾಲಕೊಂಡ ಸಿಐ ಶಂಕರ ರಾವ್, ರೇಗಿಡಿ ಎಸ್‌ಐ ಮೊಹಮ್ಮದ್ ಅಲಿ ಆಗಮಿಸಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ರಾಜಂ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಪೊಲೀಸರು ಕುಟುಂಬದವರ ಹೇಳಿಕೆ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿದಿದೆ.
ಒಟ್ಟಿನಲ್ಲಿ ನಾವೊಂದು ಬಗೆದರೆ ವಿಧಿಯೊಂದು ಬಗೆಯುತ್ತೆ ಎಂಬಂತೆ ಒಟ್ಟಿಗೆ ಬಾಳಬೇಕಾದವರು, ಒಟ್ಟಿಗೆ ಸಾವಿನ ಮನೆ ಸೇರಿದ್ದಾರೆ. ಇವರ ಆತ್ಮಹತ್ಯೆಗೆ ಕಾರಣ ಮಾತ್ರ ನಿಗೂಢವಾಗೇ ಉಳಿದಿದೆ. ಇಬ್ಬರನ್ನೂ ಕಳೆದುಕೊಂಡು ಇವರ ಕುಟುಂಬಗಳೂ ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. ಇತ್ತ ಇವರ ಸಾವಿಗೆ ಕಾರಣ ತಿಳಿಯದೇ ಊರವರು ಹಾಗೂ ಅವರ ಸ್ನೇಹಿತರು ಕಂಗಾಲಾಗಿದ್ದಾರೆ.