ತಿರುವನಂತಪುರಂ: 27 ಕ್ಕೂ ಹೆಚ್ಚು ದೇಶಗಳಿಗೆ ಹರಡಿಕೊಂಡಿರುವ ಮಂಕಿಫಾಕ್ಸ್ ಇದೀಗ ಭಾರತಕ್ಕೂ ಅಡಿ ಇಟ್ಟಿದೆ. ಕೇರಳದ 35 ವರ್ಷದ ವ್ಯಕ್ತಿಯಲ್ಲಿ ಈ ರೋಗ ಪತ್ತೆಯಾಗಿದ್ದು, ದೇಶದ ಮೊದಲ ಪ್ರಕರಣ ಇದಾಗಿದೆ.
ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಮಂಕಿಫಾಕ್ಸ್ ಸೋಂಕಿನ ಬಗ್ಗೆ ಅಧಿಕೃತವಾಗಿ ಹೇಳಿಕೆ ನೀಡಿದ್ದಾರೆ. ಯುಎಇಯಿಂದ ಬಂದಿರುವ ಕೊಲ್ಲಂನ ವ್ಯಕ್ತಿಯಲ್ಲಿ ಮಂಕಿಫಾಕ್ಸ್ ದೃಢಪಟ್ಟಿದೆ. ಅವರನ್ನು ತಿರುವನಂತಪುರಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದು ರಾಜ್ಯದ ಮತ್ತು ದೇಶದ ಮೊದಲ ಪ್ರಕರಣವಾಗಿದೆ ಎಂದು ತಿಳಿಸಿದರು.
ಸೋಂಕಿತ ವ್ಯಕ್ತಿ ಯುಎಇಗೆ ಪ್ರಯಾಣ ಬೆಳೆಸಿ ವಾಪಸ್ ಆಗಿದ್ದರು. ರೋಗಲಕ್ಷಣಗಳು ಕಂಡು ಬಂದ ಕಾರಣ ಅವರ ರಕ್ತದ ಮಾದರಿಯನ್ನು ಸಂಗ್ರಹಿಸಿ ಪುಣೆಯ ವೈರಾಲಜಿ ಲ್ಯಾಬ್‌ಗೆ ಕಳುಹಿಸಲಾಗಿತ್ತು. ಇಂದು ಬಂದ ಫಲಿತಾಂಶದಲ್ಲಿ ಮಂಕಿಫಾಕ್ಸ್ ಪಾಸಿಟಿವ್ ಎಂದು ದೃಢಪಟ್ಟಿದೆ ಎಂದರು.
ಸೋಂಕಿತನನ್ನು ಕೊಲ್ಲಂನ ಖಾಸಗಿ ಆಸ್ಪತ್ರೆಗೆ ದಾಕಲಿಸಿ ಬಳಿಕ ತಿರುವನಂತಪುರಂ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ಈತನನ್ನು ವಿಮಾನ ನಿಲ್ದಾಣದಿಂದ ಕೊಲ್ಲಂಗೆ ಟ್ಯಾಕ್ಸಿಯಲ್ಲಿ ಕರೆದುಕೊಂಡು ಬಂದ ಚಾಲಕ ಸೇರಿದಂತೆ 11 11 ಜನರಿಗೆ ಎಚ್ಚರಿಕೆ ವಹಿಸಿ, ಕ್ವಾರಂಟೈನ್‌ಗೆ ಆಗಲು ಸೂಚಿಸಲಾಗಿದೆ ಎಂದು ಆರೋಗ್ಯ ಸಚಿವರು ತಿಳಿಸಿದರು.
ಮಂಕಿಪಾಕ್ಸ್ ಸಿಡುಬು ಮಾದರಿಯ ರೋಗವಾಗಿದೆ. ಇದನ್ನು ಮೊದಲು ದಕ್ಷಿಣ ಆಫ್ರಿಕಾ ದೇಶಗಳಲ್ಲಿ ಪತ್ತೆ ಮಾಡಲಾಗಿತ್ತು. ಬಳಿಕ ಇದು 27 ಕ್ಕೂ ಅಧಿಕ ದೇಶಗಳಿಗೆ ವ್ಯಾಪಿಸಿದೆ. ಸಿಡುಬಿಗೆ ನೀಡಲಾಗುವ ಲಸಿಕೆಯನ್ನೇ ಇದಕ್ಕೆ ನೀಡಲಾಗುತ್ತದೆ.
ಓದಿ: ರಾಜ್ಯದಲ್ಲಿ ಇಂದು 1209 ಮಂದಿಗೆ ಕೋವಿಡ್ ಸೋಂಕು ದೃಢ: ಒಬ್ಬ ಸಾವು