ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮನ್ನು 'ಫಕೀರ್' ಎಂದು ಹೇಳಿಕೊಂಡಿದ್ದರು. ಫಕೀರರಾದವರು ಭದ್ರತೆಗಾಗಿ 20 ಕೋಟಿ ರೂಪಾಯಿ ಬೆಲೆಬಾಳುವ ದುಬಾರಿ ಮರ್ಸಿಡಿಸ್ ಬೆಂಜ್ ಕಾರನ್ನು ಬಳಸುತ್ತಿದ್ದಾರೆ. ಇಂತಹ ಫಕೀರ್(ಸೇವಕ) ಪ್ರಧಾನಿಯನ್ನು ದೇಶದ 140 ಕೋಟಿ ಜನರು ಮತ್ತೊಮ್ಮೆ ಆರಿಸಿ ತರಲು ದೇವರಲ್ಲಿ ಕೇಳಿಕೊಳ್ಳುತ್ತೇನೆ ಎಂದು ಕಾಂಗ್ರೆಸ್ ನಾಯಕ ಗೌರವ್ ವಲ್ಲಭ್ ವ್ಯಂಗ್ಯವಾಡಿದ್ದಾರೆ.
ಸುದ್ದಿ ಮಾಧ್ಯಮಗಳ ಜೊತೆ ಮಾತನಾಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಒಂದೆಡೆ ಮೇಕ್ ಇನ್ ಇಂಡಿಯಾ, ಲೋಕಲ್ ಫಾರ್ ವೋಕಲ್, ಸೆಲ್ಫ್ ಅಂತೆಲ್ಲಾ ಕರೆ ಕೊಡುತ್ತಾರೆ. ಆದರೆ, ಅವರೇ ವಿದೇಶಿ ನಿರ್ಮಿತ, ಅತಿ ದುಬಾರಿ ಮತ್ತು ಐಷಾರಾಮಿ ಕಾರನ್ನು ಬಳಸಲು ಸಜ್ಜಾಗಿದ್ದಾರೆ. ಅವರು ಹೇಳುವುದು ಒಂದು ಮಾಡುವುದು ಇನ್ನೊಂದು ಎಂದು ಕಿಡಿಕಾರಿದ್ದಾರೆ.
ಪ್ರಧಾನಿ ಮೋದಿ ಕಳೆದ 7 ವರ್ಷಗಳಲ್ಲಿ 5 ವಿವಿಧ ಕಾರುಗಳನ್ನು ಭದ್ರತೆಯ ಹೆಸರಿನಲ್ಲಿ ಬದಲಿಸಿದ್ದಾರೆ. ಕೊರೊನಾದಿಂದಾಗಿ ದೇಶದ ಜನರು ಸಂಕಷ್ಟ ಎದುರಿಸುತ್ತಿದ್ದಾರೆ. ಉದ್ಯಮಗಳು ನಷ್ಟದಲ್ಲಿವೆ. ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ದೇಶದ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಜನಸಾಮಾನ್ಯರು ಕಾರಿನ ಬದಲಾಗಿ ಸೈಕಲ್ ಬಳಕೆಗೆ ಒತ್ತು ನೀಡಿದರೆ, ಪ್ರಧಾನಿ ಐಷಾರಾಮಿ, ದುಬಾರಿ ಕಾರು ಖರೀದಿಸುತ್ತಿದ್ದಾರೆ ಎಂದು ಕಟಕಿಯಾಡಿದ್ದಾರೆ.
ಅಮೆರಿಕಾದ ಅಧ್ಯಕ್ಷರೂ ಕೂಡ ಇಷ್ಟು ಪ್ರಮಾಣದಲ್ಲಿ ಕಾರುಗಳನ್ನು ಬದಲಿಸಿರಲಿಕ್ಕಿಲ್ಲ. ಆದರೆ, ನಮ್ಮ ದೇಶದ ಪ್ರಧಾನಿ ಮಾತ್ರ ಅದನ್ನು ಮಾಡಿ ತೋರಿಸಿದ್ದಾರೆ. ಫಕೀರರು ಇಂತಹ ದುಬಾರಿ ಕಾರು ಬಳಸಲು ಸಾಧ್ಯವಾದರೆ, ಭಗವಂತನಲ್ಲಿ ನನ್ನದೊಂದು ಪ್ರಾರ್ಥನೆ ಇದೆ. ನನ್ನನ್ನೂ ಕೂಡ ಇಂತಹ ಫಕೀರ್ನನ್ನಾಗಿ ಮಾಡು ಅಂತ ಕೇಳುವೆ ಎಂದು ಟೀಕಿಸಿದ್ದಾರೆ.
ಈ ಹಿಂದೆ ಕಾಂಗ್ರೆಸ್ನಿಂದ ಆಯ್ಕೆಯಾದ ಪ್ರಧಾನಿಗಳ್ಯಾರು ಇಂತಹ ದುಬಾರಿ ಕಾರುಗಳನ್ನು ಬಳಸಿಲ್ಲ. ಇನ್ನು ಮುಂದೆ ಬಿಜೆಪಿ ಮತ್ತು ಪ್ರಧಾನಿಯವರು ಕಾಂಗ್ರೆಸ್ ಮುಖಂಡರನ್ನು ಟೀಕಿಸುವ ಮುನ್ನ ಇದನ್ನು ನೆನಪಿಸಿಕೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮಹಾಮಸ್ತಕಾಭಿಷೇಕದ ವೇಳೆ ಕಣ್ತೆರೆದು ನೋಡಿದ ಅಯ್ಯಪ್ಪ ಸ್ವಾಮಿ.. ವಿಡಿಯೋ ವೈರಲ್!