ನವದೆಹಲಿ : ಆತ್ಮರಕ್ಷಣೆಗಾಗಿ ದೇಶಗಳು ತೆಗೆದುಕೊಳ್ಳುವ ಕ್ರಮಗಳನ್ನು ಭಾರತ ಅರ್ಥಮಾಡಿಕೊಳ್ಳುತ್ತದೆ ಮತ್ತು ಭಯೋತ್ಪಾದನೆ ಬಗ್ಗೆ ದೇಶವು ಶೂನ್ಯ ಸಹಿಷ್ಣುತೆಯ ಹಾಗೂ ರಾಜಿಯಾಗದ ನಿಲುವನ್ನು ಹೊಂದಿದೆ ಎಂದು ಭಾರತ ಬುಧವಾರ ಹೇಳಿದೆ. ಪಶ್ಚಿಮ ಪಾಕಿಸ್ತಾನದ ಭಯೋತ್ಪಾದಕ ನೆಲೆಗಳ ಮೇಲೆ ಇರಾನ್ ಮಾರಣಾಂತಿಕ ಕ್ಷಿಪಣಿ ದಾಳಿ ನಡೆಸಿದ ಒಂದು ದಿನದ ನಂತರ ಭಾರತದ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಇರಾನ್ ಮತ್ತು ಪಾಕಿಸ್ತಾನಗಳ ಮಧ್ಯದ ಸಂಘರ್ಷದ ಬಗ್ಗೆ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಇದು ಇರಾನ್ ಮತ್ತು ಪಾಕಿಸ್ತಾನದ ನಡುವಿನ ವಿಷಯ ಎಂದು ಹೇಳಿದರು. ಪಾಕಿಸ್ತಾನದ ಮೇಲೆ ಇರಾನ್ ನಡೆಸಿದ ಕ್ಷಿಪಣಿ ದಾಳಿಯ ಬಗ್ಗೆ ಮಾಧ್ಯಮಗಳ ಪ್ರಶ್ನೆಗಳಿಗೆ ಅವರು ಪ್ರತಿಕ್ರಿಯಿಸಿದರು.
"ಭಾರತಕ್ಕೆ ಸಂಬಂಧಿಸಿದಂತೆ, ನಾವು ಭಯೋತ್ಪಾದನೆ ಬಗ್ಗೆ ಶೂನ್ಯ ಸಹಿಷ್ಣುತೆಯ ರಾಜಿಯಾಗದ ನಿಲುವನ್ನು ಹೊಂದಿದ್ದೇವೆ. ದೇಶಗಳು ತಮ್ಮ ಆತ್ಮರಕ್ಷಣೆಗಾಗಿ ತೆಗೆದುಕೊಳ್ಳುವ ಕ್ರಮಗಳನ್ನು ನಾವು ಅರ್ಥಮಾಡಿಕೊಂಡಿದ್ದೇವೆ" ಎಂದು ಜೈಸ್ವಾಲ್ ಹೇಳಿದರು.
ಬಲೂಚಿಸ್ತಾನ ಪ್ರಾಂತ್ಯದಲ್ಲಿನ ಭಯೋತ್ಪಾದಕ ಗುಂಪಿನ ನೆಲೆಗಳ ಮೇಲೆ ಟೆಹ್ರಾನ್ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸಿತ್ತು. ಬಲೂಚಿಸ್ತಾನ ಪ್ರಾಂತ್ಯದಲ್ಲಿರುವ ಸುನ್ನಿ ಬಲೂಚ್ ಉಗ್ರಗಾಮಿ ಗುಂಪು 'ಜೈಶ್ ಅಲ್-ಅದ್ಲ್' ನ ಎರಡು ನೆಲೆಗಳ ಮೇಲೆ ಮಂಗಳವಾರ ಕ್ಷಿಪಣಿಗಳು ಮತ್ತು ಡ್ರೋನ್ಗಳ ಮೂಲಕ ದಾಳಿ ನಡೆಸಲಾಗಿದೆ ಎಂದು ಇರಾನಿನ ಸರ್ಕಾರಿ ಮಾಧ್ಯಮ ವರದಿ ಮಾಡಿದೆ.
ಈ ಬೆಳವಣಿಗೆಗಳ ಮಧ್ಯೆ ಪಾಕಿಸ್ತಾನ ಬುಧವಾರ ಇರಾನ್ನಲ್ಲಿರುವ ತನ್ನ ರಾಯಭಾರಿಯನ್ನು ವಾಪಸ್ ಕರೆಯಿಸಿಕೊಂಡಿದೆ ಮತ್ತು ಮುಂದಿನ ಎಲ್ಲ ಉನ್ನತ ಮಟ್ಟದ ದ್ವಿಪಕ್ಷೀಯ ಭೇಟಿಗಳನ್ನು ಸ್ಥಗಿತಗೊಳಿಸಿದೆ. ಪ್ರಸ್ತುತ ಇರಾನ್ಗೆ ಹೋಗಿರುವ ಪಾಕಿಸ್ತಾನದಲ್ಲಿನ ಇರಾನಿನ ರಾಯಭಾರಿ ಸದ್ಯಕ್ಕೆ ಇಸ್ಲಾಮಾಬಾದ್ಗೆ ಮರಳುವುದಿಲ್ಲ ಎಂದು ಇಸ್ಲಾಮಾಬಾದ್ನಲ್ಲಿ ಪಾಕಿಸ್ತಾನ ವಿದೇಶಾಂಗ ಕಚೇರಿ ವಕ್ತಾರೆ ಮುಮ್ತಾಜ್ ಬಲೂಚ್ ಹೇಳಿದರು.
ಈ ವಾರದ ಆರಂಭದಲ್ಲಿ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಎರಡು ದಿನಗಳ ಇರಾನ್ ಭೇಟಿಗೆ ತೆರಳಿದ್ದರು. ಅಲ್ಲಿ ಅವರು ಇರಾನ್ ವಿದೇಶಾಂಗ ಸಚಿವ ಹುಸೇನ್ ಅಮಿರಬ್ಡೊಲ್ಲಾಹಿಯಾನ್ ಅವರೊಂದಿಗೆ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ಭಯೋತ್ಪಾದನೆಯನ್ನು ಅದರ ಎಲ್ಲ ರೂಪಗಳು ಮತ್ತು ಅಭಿವ್ಯಕ್ತಿಗಳಲ್ಲಿ ಖಂಡಿಸುವುದಾಗಿ ತಿಳಿಸಿದ್ದರು. ಟೆಹ್ರಾನ್ನಲ್ಲಿ ಜೈಶಂಕರ್ ಅವರು ಅಧ್ಯಕ್ಷ ಇಬ್ರಾಹಿಂ ರೈಸಿ ಅವರನ್ನು ಕೂಡ ಭೇಟಿಯಾಗಿ ಇತ್ತೀಚಿನ ಕೆರ್ಮನ್ ದಾಳಿಯ ಬಗ್ಗೆ ಸಂತಾಪ ವ್ಯಕ್ತಪಡಿಸಿದರು.
ಇದನ್ನೂ ಓದಿ : ಅಯೋಧ್ಯೆ ರಾಮಮಂದಿರ ಸ್ಮರಣಾರ್ಥ ಅಂಚೆ ಚೀಟಿ ಬಿಡುಗಡೆ ಮಾಡಿದ ಪ್ರಧಾನಿ ಮೋದಿ