ಅಚ್ಚಂಪೇಟೆ (ತೆಲಂಗಾಣ): ಸರಕಾರಿ ಆಸ್ಪತ್ರೆ ವೈದ್ಯರೊಬ್ಬರ ನಿರ್ಲಕ್ಷ್ಯದಿಂದ ಮಹಿಳೆಯು ಸಾವನ್ನಪ್ಪಿದ್ದಾರೆ ಎಂದು ಆರೋಪಿಸಲಾಗಿದೆ. ಈ ಘಟನೆ ಜಿಲ್ಲೆಯ ನಾಗರ್‌ಕರ್ನೂಲ್‌ನಲ್ಲಿ ನಡೆದಿದೆ. ಇದಕ್ಕೆ ಕಾರಣರಾದ ವೈದ್ಯನನ್ನು ಅಮಾನತು ಮಾಡಲಾಗಿದೆ.
ಸಂತ್ರಸ್ತೆಯ ಕುಟುಂಬಸ್ಥರ ಪ್ರಕಾರ, ಅಚ್ಚಂಪೇಟೆ ಪುರಸಭೆ ವ್ಯಾಪ್ತಿಯ ದರ್ಶನಗಡತಾಂಡದ ಗರ್ಭಿಣಿ ರಮಾವತ್ ರೋಜಾ (27) ಎಂಬುವರು ಆಗಸ್ಟ್ 15ರಂದು ಹೆರಿಗೆಗಾಗಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಕರ್ತವ್ಯದಲ್ಲಿದ್ದ ವೈದ್ಯರು ಮಹಿಳೆಗೆ ಶಸ್ತ್ರಚಿಕಿತ್ಸೆ ಮಾಡಿದ ವೇಳೆ, ಗಂಡು ಮಗುವಿಗೆ ಜನ್ಮ ನೀಡಿದ್ದರು. ಆದರೆ ಮೂರು ದಿನಗಳ ಚಿಕಿತ್ಸೆ ಬಳಿಕ ಮಹಿಳೆಯನ್ನು ಮನೆಗೆ ಕಳುಹಿಸಲಾಯಿತು.
ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಮಹಿಳೆ ಸಾವು : ಮಹಿಳೆ ಮನೆಗೆ ಹೋದ ನಂತರ ಸ್ವಲ್ಪ ರಕ್ತಸ್ರಾವ ಶುರುವಾಗಿದೆ. ಮಂಗಳವಾರ ಸಮಸ್ಯೆ ಉಲ್ಬಣಿಸಿದ್ದರಿಂದ ಮತ್ತೆ ಸರ್ಕಾರಿ ಆಸ್ಪತ್ರೆಗೆ ಕರೆಕೊಂಡು ಬರಲಾಯಿತು. ಆ ವೇಳೆ ಸರ್ಕಾರಿ ಆಸ್ಪತ್ರೆ ವೈದ್ಯರು, ತಮ್ಮದೆ ಖಾಸಗಿ ಆಸ್ಪತ್ರೆಗೆ ಹೋಗುವಂತೆ ಸೂಚಿಸಿದ್ದಾರೆ. ಅಲ್ಲಿಗೆ ಹೋದ ವೇಳೆಯಲ್ಲಿ, ಸಂಜೆಯವರೆಗೂ ಮಹಿಳೆಯೊಂದಿಗೆ ಕುಟುಂಬಸ್ಥರು ಕಾಯ್ದು ಕುಳಿತಿದ್ದರು. ಬಳಿಕ ಆ ವೈದ್ಯ ಹೈದರಾಬಾದ್ಗೆ ಕರೆದುಕೊಂಡು ಹೋಗುವಂತೆ ಸೂಚನೆ ನೀಡಿದರು. ನಂತರ, ಮಹಿಳೆ ರೋಜಾ ಅವರನ್ನು ಹೈದರಾಬಾದ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದ್ರೆ ಮಂಗಳವಾರ ರಾತ್ರಿ ಅವರು ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಸಂತ್ರಸ್ತೆಯ ಕುಟುಂಬದವರಿಂದ ಧರಣಿ : ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರು, ಮಹಿಳೆ ಹೊಟ್ಟೆಯಲ್ಲಿ ಹತ್ತಿ ಬಿಟ್ಟಿದ್ದರಿಂದ ತೀವ್ರ ರಕ್ತಸ್ರಾವವಾದ ಪರಿಣಾಮ ಮೃತಪಟ್ಟಿದ್ದಾರೆ ಎಂದು ಸಂತ್ರಸ್ತೆಯ ಕುಟುಂಬಸ್ಥರು ಆರೋಪಿಸಿದ್ದು, ಮೃತದೇಹದೊಂದಿಗೆ ಅಚ್ಚಂಪೇಟೆ ಆಸ್ಪತ್ರೆಗೆ ಬಂದು ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಈ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ಸರಕಾರಿ ಸಚೇತಕ ಗುವ್ವಾಲ ಬಾಲರಾಜು ಭರವಸೆ ನೀಡಿದ್ದಾರೆ. ಆ ಬಳಿಕ ಸಂತ್ರಸ್ತೆಯ ಕುಟುಂಬದವರು ಧರಣಿ ಹಿಂಪಡೆದುಕೊಂಡರು.
ಸರ್ಕಾರಿ ಆಸ್ಪತ್ರೆ ವೈದ್ಯ ಅಮಾನತು : ರೋಜಾ ಅವರ ಪತಿ ರಿಕ್ಯಾ ಅವರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಎಸ್‌ಐ ಗೋವರ್ಧನ್ ತಿಳಿಸಿದ್ದಾರೆ. ಮಹಿಳೆ ಸಾವಿಗೆ ಕಾರಣರಾದ ಸರ್ಕಾರಿ ಆಸ್ಪತ್ರೆ ವೈದ್ಯ ಡಾ. ಕೃಷ್ಣ ಅವರನ್ನು ಅಮಾನತು ಮಾಡಲಾಗಿದೆ ಎಂದು ರಾಜ್ಯ ವೈದ್ಯಕೀಯ ನೀತಿ ಆಯುಕ್ತ ಡಾ. ಅಜಯ್ ಕುಮಾರ್ ತಿಳಿಸಿದ್ದಾರೆ. ಆರೋಗ್ಯ ಸಚಿವ ಹರೀಶ್ ರಾವ್ ಅವರ ಆದೇಶದ ಮೇರೆಗೆ ಆಯುಕ್ತರು ಆಸ್ಪತ್ರೆಯಲ್ಲಿ ವಿಚಾರಣೆ ನಡೆಸಿದರು.
ಇದನ್ನೂ ಓದಿ: ಬೂದಗುಂಪಾ ಪ್ರಕರಣ: ಇಬ್ಬರು ಕಾನ್ಸ್‌ಟೇಬಲ್ ಸಸ್ಪೆಂಡ್; ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಕ್ರಮಕ್ಕೆ ಶಿಫಾರಸು