ಕೊರೊನಾ ಸಾಂಕ್ರಾಮಿಕ ರೋಗ ಕಳೆದ ವರ್ಷ ದೇಶವನ್ನು ಬಾಧಿಸಲು ಆರಂಭಿಸಿದ ಬಳಿಕ ಮನುಷ್ಯನ ಜೀವ ಉಳಿಸುವ ದೇವಾಲಯಗಳಾಗಬೇಕಿದ್ದ ಆಸ್ಪತ್ರೆಗಳು "ಕ್ಯಾ"ಸ್ಪಿಟಲ್ಗಳಾಗಿ ಪರಿವರ್ತನೆ ಹೊಂದಿವೆ. ಜೀವ ಉಳಿಸುವ ಬದಲು, ಬಹುತೇಕ ಆಸ್ಪತ್ರೆಗಳು ರೋಗಿಗಳ ರಕ್ತ ಹೀರಲಾರಂಭಿಸಿವೆ.
ಬಡವರು, ಶ್ರೀಮಂತರು ಎಂಬ ಭೇದ-ಭಾವವಿಲ್ಲದೆ ಈ ಆಸ್ಪತ್ರೆಗಳು ಎಲ್ಲರನ್ನು ಏಕ ರೀತಿಯಲ್ಲಿ ಶೋಷಣೆಗೊಳಪಡಿಸುತ್ತಿವೆ. ಸಾರ್ವಜನಿಕರ ಅಸಹಾಯಕತೆಯೇ ಅವುಗಳ ಬಂಡವಾಳವಾಗಿ ಪರಿವರ್ತನೆಗೊಂಡಿದೆ. ಕಳೆದ ವರ್ಷದ ಜುಲೈ ತಿಂಗಳಿನಲ್ಲೇ ಸುಪ್ರೀಂ ಕೋರ್ಟ್ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ಬಡವರಿಗೆ ಆಸ್ಪತ್ರೆಗಳಲ್ಲಿ ಸೂಕ್ತ ವೈದ್ಯಕೀಯ ಸೌಲಭ್ಯ, ಚಿಕಿತ್ಸೆ ದೊರಕುವಂತಾಗಲು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡುವ ಬಗ್ಗೆ ಪರಿಶೀಲಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ದೇಶದ ನಾನಾ ರಾಜ್ಯಗಳಲ್ಲಿ ಅಲ್ಲಿನ ಹೈಕೋರ್ಟ್ಗಳ ಸೂಚನೆ ಮೇರೆಗೆ ಅಲ್ಲಿನ ರಾಜ್ಯ ಸರ್ಕಾರಗಳು ಕೋವಿಡ್ 19 ರೋಗಿಗಳಿಗೆ ಕೈಗೆಟುಕುವ ದರದಲ್ಲಿ ಚಿಕಿತ್ಸೆ ದೊರಕುವಂತಾಗಲು ಆದೇಶಗಳನ್ನು ಹೊರಡಿಸಿವೆ.
ಈ ಸಂಬಂಧ ರಾಜ್ಯಗಳ ಹೈಕೋರ್ಟ್ಗಳಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಗಳು ಸಲ್ಲಿಕೆಗೊಂಡು ಆಸ್ಪತ್ರೆಗಳಲ್ಲಿನ ಶುಲ್ಕ ನಿಯಂತ್ರಣಕ್ಕೆ ಕೋರಲಾಗಿತ್ತು. ಈ ಅರ್ಜಿಗಳ ಮೇಲೆ ನ್ಯಾಯಾಲಯ ಜನಪರ ಆದೇಶ ಹೊರಡಿಸಿ, ಜನರಿಗೆ ಮಹದುಪಕಾರ ಮಾಡಿವೆ. ಉದಾಹರಣೆಗೆ ತನ್ನ ಆದೇಶಗಳನ್ನು ಪಾಲಿಸಲು ವಿಫಲವಾದ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಳೆದ ವರ್ಷದ ಜುಲೈನಲ್ಲಿ ತೆಲಂಗಾಣ ಹೈಕೋರ್ಟ್ ಅಲ್ಲಿನ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಆದರೆ, ಆ ನಿರ್ದೇಶನಗಳ ಜಾರಿ ಇನ್ನೂ ನಡೆದಿಲ್ಲ.
ಖಾಸಗಿ ಆಸ್ಪತ್ರೆಗಳಿಂದ ಬಡ ರೋಗಿಗಳ ಶೋಷಣೆ ಕೈ ಮೀರುತ್ತಿದೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ತೆಲಂಗಾಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಸಂಘದೊಂದಿಗೆ ಸಮಾಲೋಚಿಸಿ, ಆಸ್ಪತ್ರೆ ಶುಲ್ಕ ನಿಯಂತ್ರಣ ಆದೇಶಗಳನ್ನು ಹೊರಡಿಸುವಂತೆ ತೆಲಂಗಾಣ ಹೈಕೋರ್ಟ್ ಮತ್ತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಪಕ್ಕದ ಆಂಧ್ರಪ್ರದೇಶ ಸರ್ಕಾರ ಆಸ್ಪತ್ರೆಗಳು ರೋಗಿಗಳಿಗೆ ಹಾಸಿಗೆಗಳನ್ನು ನಿರಾಕರಿಸುವ ಘಟನೆಗಳನ್ನು ಗಂಭೀರವಾಗಿ ಪರಿಗಣಿಸುತ್ತಿದೆ. ತೆಲಂಗಾಣ ಹೈಕೋರ್ಟ್ ರಾಜ್ಯದಲ್ಲಿನ ಆಸ್ಪತ್ರೆಗಳ ಮೇಲಿನ ದೂರು ಸಮಿತಿಗಳಿಗೆ ಮರು ಜೀವ ನೀಡುವಂತೆ ಆದೇಶಿಸಿದೆ.
ಈಗ ಕೇಳಿ ಬರುತ್ತಿರುವ ಆರೋಪಗಳೆಂದರೆ, ಖಾಸಗಿ ಆಸ್ಪತ್ರೆಗಳು ಚಿಕಿತ್ಸೆಯನ್ನು ಪ್ರಾರಂಭಿಸುವ ಮೊದಲು 1 ಲಕ್ಷ ರೂಪಾಯಿಗಳ ಎಚ್ಚರಿಕೆಯ ಠೇವಣಿಯನ್ನು ರೋಗಿಗಳ ಕುಟುಂಬದಿಂದ ಸಂಗ್ರಹಿಸುತ್ತಿವೆ. ಜೊತೆಗೆ ಪ್ರತಿ ರೋಗಿಯಿಂದ 2 ಲಕ್ಷದಿಂದ 20 ಲಕ್ಷ ರೂಪಾಯಿಗಳವರೆಗೆ ಚಿಕಿತ್ಸಾ ಶುಲ್ಕವಾಗಿ ಸಂಗ್ರಹಿಸಲಾಗುತ್ತಿದೆ. ಇದು ನಿಜವಾಗಿಯೂ ಅಮಾನವೀಯ ಮತ್ತು ಆಸ್ಪತ್ರೆಗಳ ನಡೆ ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ದೊರಕುವ ಚಿಕಿತ್ಸೆಗೆ ಹೋಲಿಸಿದರೆ ಉತ್ತಮ ಗುಣಮಟ್ಟದ ಚಿಕಿತ್ಸೆಯು ತಮ್ಮ ಜೀವವನ್ನು ಉಳಿಸುತ್ತದೆ ಎಂಬ ನಂಬಿಕೆಯಿಂದ ಎಲ್ಲರೂ ಸರ್ಕಾರ ಆಸ್ಪತ್ರೆಗಳ ಬದಲಿಗೆ ಖಾಸಗಿ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ಸೇರಿಕೊಳ್ಳುತ್ತಾರೆ. ಈ ಕಠಿಣ ಪರಿಸ್ಥಿತಿಯ ಲಾಭ ಪಡೆಯಲು ಮಧ್ಯವರ್ತಿಗಳ ಸಹಾಯದಿಂದ ಸಿಂಡಿಕೇಟ್‌ಗಳನ್ನು ರಚಿಸುವ ಮೂಲಕ ಕ್ಯಾಶ್‌ಪಿಟಲ್‌ಗಳು ಲಾಭದ ದಂಧೆ ಮಾಡುತ್ತಿವೆ. ಆರೋಗ್ಯ ವಿಮೆ ಮತ್ತು ಜನ ಸಾಮಾನ್ಯರಿಗೆ ಇರುವ ಇತರ ಸಾಮಾನ್ಯ ಸೌಲಭ್ಯಗಳನ್ನು ಒದಗಿಸಲು ನಿರಾಕರಿಸುವುದು. ಆಸ್ಪತ್ರೆಯ ಬಾಕಿ ಹಣ ಪಾವತಿಯವರೆಗೆ ಮೃತದೇಹಗಳನ್ನು ಕುಟುಂಬಕ್ಕೆ ನೀಡಲು ನಿರಾಕರಿಸುವುದು. ಹೀಗೆ, ನಾನಾ ಅಮಾನವೀಯ ಕೃತ್ಯಗಳಿಂದ ಈ ಖಾಸಗಿ ಆಸ್ಪತ್ರೆಗಳು ಕುಖ್ಯಾತಿ ಗಳಿಸಿವೆ. ಕೋವಿಡ್ನಂತಹ ಸಂಕಷ್ಟದ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳು ತಮ್ಮ ಲಾಭಕೋರ ಬುದ್ಧಿಯನ್ನು ಪ್ರದರ್ಶಿಸಿ, ಸಾರ್ವಜನಿಕರ ಕಣ್ಣಲ್ಲಿ ಬೆತ್ತಲಾಗುತ್ತಿವೆ.
ವೈದ್ಯಕೀಯ ಸೇವೆಯು ಲಾಭ ಗಳಿಸುವ ವ್ಯವಹಾರವಲ್ಲ. ಕೈಗೆಟುಕುವ ಚಿಕಿತ್ಸೆಯು ಆರೋಗ್ಯದ ಹಕ್ಕಿನ ಭಾಗವಾಗಿದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಖಾಸಗಿ ಆಸ್ಪತ್ರೆಗಳು ಸಂಗ್ರಹಿಸುವ ಅತಿಯಾದ ಶುಲ್ಕವನ್ನು ನಿಯಂತ್ರಿಸಲು ಸರ್ವೋಚ್ಚ ನ್ಯಾಯಾಲಯ ಆದೇಶ ನೀಡಿತ್ತು. ಈ ಹಿಂದೆ ರಾಜ್ಯ ಸರ್ಕಾರಗಳು ಏಕಪಕ್ಷೀಯವಾಗಿ ನಿರ್ಧರಿಸಿದ ಆಸ್ಪತ್ರೆ ಶುಲ್ಕವು ತಮಗೆ ಒಪ್ಪಿತವಲ್ಲ ಎಂದು ಖಾಸಗಿ ಆಸ್ಪತ್ರೆ ಮಾಲೀಕರು ಈ ಹಿಂದೆ ಸ್ಪಷ್ಟಪಡಿಸಿ, ಸರ್ಕಾರದ ಆದೇಶ ಪಾಲಿಸಲು ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ಎಲ್ಲರಿಗು ಒಪ್ಪಿಗೆಯಾಗುವ ಸರ್ವ ಸಮ್ಮತ ಆಸ್ಪತ್ರೆ ದರವನ್ನು ನಿಗದಿಪಡಿಸಲು ಸರ್ಕಾರಗಳು ತುರ್ತು ಕ್ರಮ ಕೈಗೊಳ್ಳಬೇಕಿದೆ. ಈ ಹಿಂದೆ ರಾಜ್ಯದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿನ ದರವನ್ನು ನಿಯಂತ್ರಿಸಲು ಅಲ್ಲಿನ ರಾಜ್ಯ ಸರ್ಕಾರ ಕೈಗೊಂಡ ನಿಯಂತ್ರಕ ಕ್ರಮಗಳನ್ನು ಕೇರಳ ಹೈಕೋರ್ಟ್ ಶ್ಲಾಘಿಸಿತ್ತು. ಆದಾಗ್ಯೂ, ಕೇರಳ ಖಾಸಗಿ ಆಸ್ಪತ್ರೆಗಳ ಒಕ್ಕೂಟ ವೈಯಕ್ತಿಕ ಕೊಠಡಿಗಳು, ಐಷಾರಾಮಿ ವಸತಿ, ಆರೋಗ್ಯ ವಿಮಾ ಫಲಾನುಭವಿಗಳು ಮತ್ತು ಇತರ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಂದ ಸಂಗ್ರಹಿಸಬೇಕಾದ ದರದ ಬಗ್ಗೆ ಹೆಚ್ಚಿನ ಸ್ಪಷ್ಟನೆ ಕೋರಿ ಆಕ್ಷೇಪಣೆಗಳನ್ನು ಎತ್ತಲಾಗಿದೆ.
ಇಂದು ನಮ್ಮ ದೇಶದ ಪ್ರಮುಖ ನಗರಗಳಲ್ಲಿ ಐಸಿಯು ಸೌಲಭ್ಯಕ್ಕಾಗಿ ದಿನಕ್ಕೆ ಒಂದು ಲಕ್ಷ ರೂ. ದರ ನಿಗದಿಪಡಿಸಲಾಗಿದೆ. ಆದರೆ, ಆರೋಗ್ಯ ವಿಮಾ ಕಂಪನಿಗಳು ಈ ಸೌಲಭ್ಯಕ್ಕಾಗಿ ದಿನಕ್ಕೆ 18,000 ರೂ.ಗಳನ್ನು ಮಾತ್ರ ಪಾವತಿಸಬಹುದೆಂದು ಹೇಳುತ್ತಿವೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ನೀತಿಯನ್ನು ರೂಪಿಸಲು ಕೇಂದ್ರವು ಆಸ್ಪತ್ರೆ ನಿರ್ವಹಣೆ ಮತ್ತು ಆರೋಗ್ಯ ವಿಮಾ ಕಂಪನಿಗಳ ಸಭೆಯನ್ನು ಕರೆದು ಒಂದು ಸ್ಪಷ್ಟ ಮಾರ್ಗದರ್ಶನ ನೀಡಬೇಕಿದೆ.
ಉತ್ತಮ ಆರೋಗ್ಯ ಎಲ್ಲರ ಹಕ್ಕು. ಆದರೆ, ನಮ್ಮ ದೇಶದಲ್ಲಿ ಇಂದಿಗೂ ದುಬಾರಿ ಆರೋಗ್ಯ ಸೇವೆ ಪಡೆಯಲು ಸಾಧ್ಯವಿಲ್ಲದೆ ಬಳಲುತ್ತಿರುವ ಕೋಟ್ಯಂತರ ಜನರಿದ್ದಾರೆ. ಖಾಸಗಿ ಆಸ್ಪತ್ರೆಗಳ ಮಾಲೀಕರು ಅವರೊಂದಿಗೆ ಮಾನವೀಯ ನೆಲೆಯಲ್ಲಿ ವರ್ತಿಸಿದರೆ ಮಾತ್ರ ಎಲ್ಲರ ಬದುಕಿನಲ್ಲಿ ಆರೋಗ್ಯದ ಹೊನಲು ಹರಿಯಲು ಸಾಧ್ಯವಿದೆ.