ಜೌನ್ಪುರ್(ಉತ್ತರ ಪ್ರದೇಶ): ದೇಶದಲ್ಲಿ ಡೆಡ್ಲಿ ವೈರಸ್ ಹಾವಳಿ ಜೋರಾಗಿದ್ದು, ರೋಗಿಗಳಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ ಸಾವಿರಾರು ಜನರು ಸಾವಿನ ಮನೆ ತಲುಪುತ್ತಿದ್ದಾರೆ.
ಇದೀಗ ಉತ್ತರ ಪ್ರದೇಶದ ಜಾನ್ಪುರ್ದಲ್ಲಿ ನಡೆದ ಘಟನೆವೊಂದು ಮನಕಲಕುವಂತಿದೆ. ಕೋವಿಡ್ ಸೋಂಕಿಗೊಳಗಾಗಿದ್ದ ಯುವಕನೊಬ್ಬನಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಲಭಿಸದೇ ತಾಯಿ ಮಡಿಲಲ್ಲಿ ಪ್ರಾಣ ಬಿಟ್ಟಿದ್ದಾನೆ. ಬನಾರಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದ ಕಾರಣಕ್ಕಾಗಿ ವಿನೀತ್ ಎಂಬ ಯುವಕ ಆಟೋದಲ್ಲಿ ತಾಯಿ ಮಡಿಲಲ್ಲೇ ಮೃತಪಟ್ಟಿದ್ದಾನೆ.
ಏನಿದು ಪ್ರಕರಣ!?
ಜೌನ್ಪುರ್ ಪೊಲೀಸ್ ಠಾಣೆಯ ಶೀತಲ್ಗಂಜ್ ಅಹಿರುಲಿ ಗ್ರಾಮದ ನಿವಾಸಿ ವಿನೀತ್ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದನು. ಕಳೆದ ಡಿಸೆಂಬರ್ ತಿಂಗಳಲ್ಲಿ ಆತ ಗ್ರಾಮಕ್ಕೆ ವಾಪಸ್ ಆಗಿದ್ದನು. ಕೊರೊನಾ ಸೋಂಕಿಗೊಳಗಾಗಿದ್ದ ಆತನ ಆರೋಗ್ಯದಲ್ಲಿ ಏಕಾಏಕಿ ಏರುಪೇರು ಕಂಡು ಬಂದ ಕಾರಣ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ, ಅಲ್ಲಿ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಲಭ್ಯವಾಗದೇ ಆತ ಸಾವನ್ನಪ್ಪಿದ್ದಾನೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಚಂದ್ರಕಲಾ, ಕೊರೊನಾದಿಂದಾಗಿ ಯಾವುದೇ ವೈದ್ಯರು ಆತನಿಗೆ ಚಿಕಿತ್ಸೆ ನೀಡಲು ಸಿದ್ಧರಿರಲಿಲ್ಲ. ಬನಾರಸ್ನ ಪ್ರತಿವೊಂದು ಆಸ್ಪತ್ರೆಗೂ ನಾನು ಸಂಚರಿಸಿದ್ದೇನೆ. ಆತನನ್ನು ದಾಖಲು ಮಾಡಿಕೊಳ್ಳಲು ಯಾವ ಆಸ್ಪತ್ರೆ ಕೂಡ ಸಿದ್ಧರಿರಲಿಲ್ಲ ಎಂದಿದ್ದಾರೆ. ಆಟೋದಲ್ಲಿ ತಾಯಿ ಮಡಿಲಲ್ಲಿ ಮಲಗಿದ್ದ ವಿನೀತ್ ಉಸಿರಾಟದ ತೊಂದರೆಯಿಂದ ಸಾವನ್ನಪ್ಪಿದ್ದಾನೆ.
ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದ ಕಾರಣ ಆತ ಸಾವನ್ನಪ್ಪಿದ್ದಾನೆ ಎಂದು ಮೃತ ವಿನೀತ್ ಚಿಕ್ಕಪ್ಪ ಹೇಳಿದ್ದು, ಇದಕ್ಕೆ ಆರೋಗ್ಯ ವ್ಯವಸ್ಥೆ ನಿರ್ಲಕ್ಷ್ಯವೇ ಕಾರಣ ಎಂದು ತಿಳಿಸಿದ್ದಾರೆ. ಇನ್ನು ವಿವಿಧ ಆಸ್ಪತ್ರೆಗಳಿಗೆ ಆಟೋದಲ್ಲಿ ಸಂಚರಿಸಿದ್ದರಿಂದ ಆತ 250 ರೂ ಬದಲಿಗೆ 1200 ರೂಪಾಯಿಗೆ ಬೇಡಿಕೆ ಇಟ್ಟಿದ್ದಾಗಿ ಹೇಳಿದ್ದಾರೆ.
ಮಗ ವಿನೀತ್ ನಿಧನದಿಂದಾಗಿ ಮನೆಯಲ್ಲಿ ತಾಯಿ ಆಕ್ರಂದನ ಮುಗಿಲು ಮುಟ್ಟಿದೆ. ಈಗಾಗಲೇ ಗಂಡ ಹಾಗೂ ಹಿರಿಯ ಮಗ ಸಂದೀಪ್ನನ್ನ ಕಳೆದುಕೊಂಡಿದ್ದು, ಇದೀಗ ಕಿರಿಯ ಮಗ ಸಹ ಸಾವನ್ನಪ್ಪಿದ್ದಾನೆ.