ಮುಂಬೈ(ಮಹಾರಾಷ್ಟ್ರ): ದೇಶದಲ್ಲಿ ಮಹಾಮಾರಿ ಕೊರೊನಾ ವೈರಸ್ನ ಮೂರನೇ ಅಲೆ ಜೋರಾಗಿದ್ದು, ಪ್ರಮುಖವಾಗಿ ಮಹಾರಾಷ್ಟ್ರದಲ್ಲಿ ಇದರ ಆರ್ಭಟ ಪ್ರತಿದಿನ ವೇಗ ಪಡೆದುಕೊಳ್ಳುತ್ತಿದೆ. ದಿನನಿತ್ಯ ಸಾವಿರಾರು ಹೊಸ ಹೊಸ ಪ್ರಕರಣ ದಾಖಲಾಗುತ್ತಿವೆ. ಈ ಮಧ್ಯೆ ಮುಂಬೈನಲ್ಲಿ ಸರ್ಕಾರಿ ಕೋವಿಡ್ ಕೇಂದ್ರಗಳಲ್ಲಿ ಶೇ. 80ರಷ್ಟು ಹಾಸಿಗೆ ಖಾಲಿ ಇದ್ದರೂ, ಸೋಂಕಿತರು ಹೆಚ್ಚಾಗಿ ಖಾಸಗಿ ಆಸ್ಪತ್ರೆಗಳ ಕಡೆಗೆ ಮುಖ ಮಾಡಿದ್ದಾರೆ.
ಮುಂಬೈನಲ್ಲಿ ಪ್ರತಿದಿನ 20 ಸಾವಿರಕ್ಕೂ ಅಧಿಕ ಸೋಂಕು ಪ್ರಕರಣ ದಾಖಲಾಗುತ್ತಿರುವ ಕಾರಣ ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ ಕೋವಿಡ್ ಎದುರಿಸಲು ಸಜ್ಜಾಗಿದೆ. ಅದಕ್ಕಾಗಿ ಪ್ರಮುಖ 9 ಸ್ಥಳಗಳಲ್ಲಿ ಜಂಬೋ ಕೋವಿಡ್ ಕೇಂದ್ರ ಸ್ಥಾಪನೆ ಮಾಡಿದೆ. ಆದರೆ, ಮುಂಬೈನ ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿತರು ಹೆಚ್ಚಾಗಿ ದಾಖಲಾಗುತ್ತಿದ್ದಾರೆ.
ಲಭ್ಯವಾಗಿರುವ ಮಾಹಿತಿ ಪ್ರಕಾರ, ಸೋಂಕಿಗೆ ತುತ್ತಾದವರಲ್ಲಿ ಶೇ. 30ರಷ್ಟು ಜನರು ಶ್ರೀಮಂತರಾಗಿದ್ದು, ಸರ್ಕಾರಿ ಆಸ್ಪತ್ರೆಗಳಿಗೆ ಹೋಗುವ ಬದಲಾಗಿ ಖಾಸಗಿ ಆಸ್ಪತ್ರೆಗಳ ಕಡೆಗೆ ಮುಖ ಮಾಡಿದ್ದಾರೆ. ಇದೇ ಕಾರಣಕ್ಕಾಗಿ ಖಾಸಗಿ ಆಸ್ಪತ್ರೆಗಳು ಶೇ. 80ರಷ್ಟು ಬೆಡ್ ಕೊರೊನಾ ಸೋಂಕಿತರಿಗೆ ಮೀಸಲು ಇಡುವಂತೆ ಸೂಚನೆ ನೀಡಲಾಗಿದ್ದು, ಯಾವುದೇ ರೀತಿಯ ಹೆಚ್ಚುವರಿ ಶುಲ್ಕ ವಿಧಿಸದಂತೆ ಪಾಲಿಕೆ ಸೂಚನೆ ನೀಡಿದೆ.
ನಿಯಮ ಉಲ್ಲಂಘನೆ ಮಾಡುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾಯ್ದೆ 1897 ಹಾಗೂ ವಿಪತ್ತು ನಿರ್ವಹಣಾ ಕಾಯ್ದೆ 2005ರ ಪ್ರಕಾರ ಕ್ರಮ ಕೈಗೊಳ್ಳುವುದಾಗಿ ಪಾಲಿಕೆ ಎಚ್ಚರಿಕೆ ನೀಡಿದೆ.
ಇದನ್ನೂ ಓದಿರಿ: 100 ದಿನಗಳಲ್ಲಿ ಮೂವರು DGP ; ನಮೋ ಭದ್ರತಾ ಲೋಪ ಬೆನ್ನಲ್ಲೇ ಪಂಜಾಬ್ನಲ್ಲಿ ನೂತನ ಡಿಜಿಪಿ ನೇಮಕ
ಪಾಲಿಕೆ ನೀಡಿರುವ ಮಾಹಿತಿ ಪ್ರಕಾರ ಮುಂಬೈನಲ್ಲಿ ಕೋವಿಡ್ ರೋಗಿಗಳಿಗಾಗಿ 16,207 ಹಾಸಿಗೆ ಲಭ್ಯವಿದ್ದು, ಇದರಲ್ಲಿ ಸದ್ಯ 14,400 ಬೆಡ್ ಖಾಲಿ ಇವೆ. 8,287 ಆಕ್ಸಿಜನ್ ಬೆಡ್ಗಳ ಪೈಕಿ 779 ಮಾತ್ರ ಬಳಕೆಯಾಗಿದ್ದು, ಉಳಿದೆಲ್ಲವೂ ಖಾಲಿ ಇವೆ. 2204 ತೀವ್ರ ನಿಗಾ ಘಟಕಗಳ ಪೈಕಿ 1680 ಖಾಲಿ ಇದ್ದು, 1285 ವೆಂಟಿಲೇಟರ್ಗಳ ಪೈಕಿ 916 ಖಾಲಿ ಇವೆ ಎಂದು ತಿಳಿಸಿದೆ. ಮುಂಬೈನಲ್ಲಿ ಕಳೆದ 24 ಗಂಟೆಗಳಲ್ಲಿ ದಾಖಲೆಯ 20,318 ಕೋವಿಡ್ ಸೋಂಕಿತ ಪ್ರಕರಣ ದಾಖಲಾಗಿವೆ.