ಸತಾರಾ(ಮಹಾರಾಷ್ಟ್ರ): ವಿಶ್ವವನ್ನೇ ಕಾಡಿದ್ದ ಕೊರೊನಾ ದೇಶದಲ್ಲಿ ಮತ್ತೆ ಸಣ್ಣದಾಗಿ ವ್ಯಾಪಿಸುತ್ತಿದೆ. ಮಹಾರಾಷ್ಟ್ರ ಮತ್ತು ದೆಹಲಿಯಲ್ಲಿ ತಲಾ ಇಬ್ಬರು ಕೊರೊನಾ ಸೋಂಕಿತರು ಸಾವನ್ನಪ್ಪಿದ್ದಾರೆ. ದೇಶದಲ್ಲಿ 24 ಗಂಟೆ ಅವಧಿಯಲ್ಲಿ 3641 ಹೊಸ ಕೇಸ್ಗಳು ದಾಖಲಾಗಿವೆ.
ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 45ಕ್ಕೆ ತಲುಪಿದೆ. ಇಬ್ಬರು ಸಾವನ್ನಪ್ಪಿದ್ದಾರೆ. ಇನ್‌ಫ್ಲುಯೆಂಜಾ ಕಾಯಿಲೆ ಮತ್ತು ಕೋವಿಡ್ ಹೆಚ್ಚಾಗುತ್ತಿದ್ದು, ಸರ್ಕಾರಿ ಮತ್ತು ಅರೆ ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಮತ್ತು ನೌಕರರು ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಲಾಗಿದೆ. ಜನಸಂದಣಿ ಇರುವ ಸ್ಥಳಗಳಲ್ಲಿ ಸ್ವಯಂಪ್ರೇರಿತವಾಗಿ ಮಾಸ್ಕ್ ಬಳಸುವಂತೆ ಅಲ್ಲಿನ ಜಿಲ್ಲಾಧಿಕಾರಿ ನಾಗರಿಕರಿಗೆ ಮನವಿ ಮಾಡಿದ್ದಾರೆ.
ಇನ್‌ಫ್ಲುಯೆಂಜಾ ಮತ್ತು ಕೋವಿಡ್ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿದೆ. ಸಾರ್ವಜನಿಕ ಆರೋಗ್ಯ ಇಲಾಖೆಯ ಕಾರ್ಯದರ್ಶಿಗಳು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಗಳಿಗೆ ಸೂಚನೆ ನೀಡಿದ್ದಾರೆ. ಅದರಂತೆ ಜಿಲ್ಲಾಧಿಕಾರಿಗಳು ಸರ್ಕಾರಿ ಮತ್ತು ಅರೆ ಸರ್ಕಾರಿ ಕಚೇರಿಗಳಲ್ಲಿ ಮಾಸ್ಕ್ ಬಳಕೆಯನ್ನು ಕಡ್ಡಾಯ ಮಾಡಿ ಆದೇಶಿಸಿದ್ದಾರೆ. ಮಾರುಕಟ್ಟೆಗಳು, ಕೂಟಗಳು, ಮದುವೆ ಸಮಾರಂಭಗಳು ಮತ್ತು ಜನ ಸೇರುವ ಸಭೆಗಳಲ್ಲಿ ಸ್ವಯಂ ಪ್ರೇರಣೆಯಿಂದ ಮಾಸ್ಕ್ ಬಳಸಬೇಕು. ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಸುವಂತೆ ಸೂಚಿಸಲಾಗಿದೆ.
ಪ್ರಸ್ತುತ ಯಾವುದೇ ಕೊರೊನಾ ಸೋಂಕಿತರ ಸ್ಥಿತಿ ಗಂಭೀರವಾಗಿಲ್ಲ. ಮನೆಯಲ್ಲಿ ಐಸೋಲೇಶನ್‌ನಲ್ಲಿರುವ ಜನರು ಮುಕ್ತರಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ ಹನ್ನೆರಡು ಜನರಿಂದ ಸ್ವ್ಯಾಬ್ ಮಾದರಿಗಳನ್ನು ತೆಗೆದುಕೊಳ್ಳಲಾಗಿದೆ. ಈ ಪೈಕಿ ಮೂವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ದೆಹಲಿಯಲ್ಲಿ ಕೊರೊನಾ ಸ್ಥಿತಿ: ದೆಹಲಿಯಲ್ಲಿ ಸೋಮವಾರ 293 ಹೊಸ ಕೋವಿಡ್ -19 ಪ್ರಕರಣಗಳು ದಾಖಲಾಗಿವೆ. ಪಾಸಿಟಿವಿಟಿ ದರವು ಶೇಕಡಾ 18.53 ಕ್ಕೆ ಏರಿದೆ. ಪ್ರತಿ 5 ಜನರಲ್ಲಿ ಒಬ್ಬರು ಧನಾತ್ಮಕವಾಗಿ ಪರೀಕ್ಷಿಸಲ್ಪಟ್ಟಿದ್ದಾರೆ ಎಂದು ನಗರ ಆರೋಗ್ಯ ಇಲಾಖೆ ಹಂಚಿಕೊಂಡ ಮಾಹಿತಿಯಲ್ಲಿದೆ. ಇದಲ್ಲದೇ, ಎರಡು ಕೋವಿಡ್ ಸಂಬಂಧಿತ ಸಾವುಗಳು ವರದಿಯಾಗಿವೆ. ಸಾವಿಗೆ ಪ್ರಾಥಮಿಕ ಕಾರಣ ಕೊರೊನಾ ವೈರಸ್ ಅಲ್ಲ ಎಂದು ಆರೋಗ್ಯ ಇಲಾಖೆ ಬುಲೆಟಿನ್ ಉಲ್ಲೇಖಿಸಿದೆ. ಒಟ್ಟಾರೆ ಕೊರೊನಾ ಸಾವಿನ ಸಂಖ್ಯೆ 26,532 ತಲುಪಿದೆ.
ದೇಶದಲ್ಲಿ ಕೊರೊನಾ ಏರಿಕೆ: ಇನ್ನು ದೇಶದಲ್ಲೂ ಕೊರೊನಾ ಏರಿಕೆ ಕಾಣುತ್ತಿದೆ. ನಿನ್ನೆಯಿಂದ 24 ಗಂಟೆಗಳ ಅವಧಿಯಲ್ಲಿ 3641 ಕೊರೊನಾ ಸೋಂಕಿತ ಪ್ರಕರಣಗಳು ದಾಖಲಾಗಿವೆ. ದೇಶದಲ್ಲಿ ಸದ್ಯಕ್ಕೆ 20,219 ಸೋಂಕಿತರು ಇದ್ದಾರೆ. ಒಂದೇ ದಿನದಲ್ಲಿ 1800 ಜನರು ವೈರಸ್ನಿಂದ ಗುಣಮುಖರಾಗಿದ್ದಾರೆ. ದೇಶದಲ್ಲಿ ಸಕ್ರಿಯ ಪ್ರಕರಣಗಳು ಶೇ.0.05 ಮಾತ್ರ ಇದೆ. ಗುಣಮುಖರಾಗುತ್ತಿರುವವರ ದರ ಶೇ.98.76 ರಷ್ಟಿದೆ. ದಿನಂಪ್ರತಿ ಪಾಸಿಟಿವಿಟಿ ದರ 6.12 ಪ್ರತಿಶತದಷ್ಟಿದ್ದರೆ, ವಾರದ ದರ ಶೇಕಡಾ 2.45 ನಷ್ಟಿದೆ.
ಕೊರೊನಾ ವ್ಯಾಕ್ಸಿನೇಷನ್: ದೇಶದಲ್ಲಿ ಲಸಿಕೆ ಅಭಿಯಾನ ಆರಂಭಿಸಿದ ಬಳಿಕ ಈವರೆಗೂ 220.66 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ. ಅದರಲ್ಲಿ 95.21 ಕೋಟಿ ಎರಡನೇ ಡೋಸ್ ನೀಡಿದ್ದರೆ, 22.86 ಕೋಟಿ ಮುನ್ನೆಚ್ಚರಿಕಾ ಡೋಸ್ ನೀಡಲಾಗಿದ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ಹಂಚಿಕೊಂಡಿದೆ.