ನವದೆಹಲಿ: ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದ ಉತ್ತರ ಪ್ರದೇಶ- ದೆಹಲಿ ಗಡಿಯಾದ ಗಾಜಿಪುರದಲ್ಲಿ ಬ್ಯಾರಿಕೇಡ್ಗಳನ್ನು ಇಂದು ತೆರವುಗೊಳಿಸಲಾಗುತ್ತಿದೆ ಎಂದು ದೆಹಲಿ ಪೊಲೀಸ್ ಮೂಲಗಳು ಮಾಹಿತಿ ನೀಡಿವೆ. ಇದಕ್ಕೂ ಮೊದಲು ಗುರುವಾರ ರಾತ್ರಿ ಟಿಕ್ರಿ ಮತ್ತು ಗಾಜಿಪುರ ಗಡಿಗಳಲ್ಲಿ ದೆಹಲಿ ಪೊಲೀಸರು ಬ್ಯಾರಿಕೇಡ್ಗಳನ್ನು ತೆರವುಗೊಳಿಸಲು ಮುಂದಾಗಿದ್ದರು. ಈಗ ಗಾಜಿಪುರದಲ್ಲಿ ತೆರವು ಕಾರ್ಯ ಮುಂದುವರೆದಿದೆ.
ದೆಹಲಿ ಪೊಲೀಸ್ ಮೂಲಗಳು ಈ ಕುರಿತು ಎಎನ್‌ಐಗೆ ಪ್ರತಿಕ್ರಿಯೆ ನೀಡಿದ್ದು, ಟಿಕ್ರಿ ಗಡಿ ಮತ್ತು ಗಾಜಿಪುರ ಗಡಿಯಲ್ಲಿ ಶೀಘ್ರದಲ್ಲೇ ತುರ್ತು ವಾಹನಗಳ ಓಡಾಟಕ್ಕೆ ಅನುವು ಮಾಡಿ ಕೊಡಲಾಗುತ್ತದೆ. ಈ ಕುರಿತು ಈಗಾಗಲೇ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಬ್ಯಾರಿಕೇಡ್ಗಳ ತೆರವುಗೊಳಿಸಲಾಗುತ್ತಿದೆ ಎಂದಿದ್ದಾರೆ.
ಗಡಿಯಲ್ಲಿ ಬ್ಯಾರಿಕೇಡ್ಗಳನ್ನು ಅಳವಡಿಸುವ ಮೂಲಕ ಈ ಪ್ರದೇಶದಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು ಎಂದು ಸುಪ್ರೀಂಕೋರ್ಟ್ ಹೇಳಿದ ನಂತರ ಬ್ಯಾರಿಕೇಡ್ ತೆರವುಗೊಳಿಸುವ ಕಾರ್ಯಕ್ಕೆ ದೆಹಲಿ ಪೊಲೀಸರು ಮುಂದಾಗಿದ್ದಾರೆ. ಸ್ಥಳದಲ್ಲಿ ಸರ್ಕಾರ ಹಾಕಿದ್ದ ಬ್ಯಾರಿಕೇಡ್ ಮಾತ್ರವಲ್ಲದೇ ಕಾಂಕ್ರಿಟ್ ಬ್ಲಾಕ್ಗಳನ್ನು ತೆರವು ಮಾಡಲು ಕಾರ್ಮಿಕರು ಮತ್ತು ಜೆಸಿಬಿಗಳನ್ನು ಬಳಸಿಕೊಳ್ಳಲಾಗುತ್ತಿದೆ.
ರೈತರು ಪ್ರತಿಭಟನೆ ಆರಂಭಿಸಿದ ನಂತರ ದೆಹಲಿಯ ವಿವಿಧ ಗಡಿಗಳಲ್ಲಿ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ನವೆಂಬರ್ 2020ರಿಂದ ಈ ಮಾರ್ಗಗಳಲ್ಲಿ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಈಗ 11 ತಿಂಗಳ ನಂತರ ಬ್ಯಾರಿಕೇಡ್ಗಳನ್ನು ತೆರವುಗೊಳಿಸಲಾಗುತ್ತಿದೆ.
ಇದನ್ನೂ ಓದಿ: ಮೊದಲ ಮಹಡಿಯಿಂದ 2ನೇ ತರಗತಿ ಬಾಲಕನ ತಲೆಕೆಳಗಾಗಿ ನೇತು ಹಾಕಿದ ಪ್ರಾಂಶುಪಾಲ