ಬೆಟ್ಟೈಹ್(ಬಿಹಾರ): ದೇಶದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ಮಟ್ಟ ಹಾಕಲು ಹಲವು ರೀತಿಯ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಇದೀಗ ದೇಶದ ಒಳಗಿರುವ ಕೆಲವು ಕಿಡಿಗೇಡಿಗಳು ಪಾಕಿಸ್ತಾನದಿಂದ ಹಣ ಪಡೆದು ವಿಧ್ವಂಸಕ ಕೃತ್ಯಗಳನ್ನು ನಡೆಸಲು ಸಂಚು ರೂಪಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಬಿಹಾರ ಮತ್ತು ಉತ್ತರಪ್ರದೇಶ ರಾಜ್ಯಗಳಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಹುನ್ನಾರ ಹೆಣೆಯುತ್ತಿದ್ದ ಇಬ್ಬರು ಶಂಕಿತ ಉಗ್ರರನ್ನು ಪೊಲೀಸರು ಸೋಮವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಉತ್ತರಪ್ರದೇಶದ ಗಾಜಿಯಾಬಾದ್ ನಿವಾಸಿ ರಿಯಾಜುದ್ದೀನ್ ಮತ್ತು ಬಿಹಾರದ ಪಶ್ಚಿಮ ಚಂಪಾರಣ್ ಶಿಕಾರ್‌ಪುರದ ನಿವಾಸಿ ಇಝರುಲ್ ಹುಸೇನ್ ಎಂದು ಗುರುತಿಸಲಾಗಿದೆ. ರಿಯಾಜುದ್ದೀನ್ ಬ್ಯಾಂಕ್ ಖಾತೆಯಲ್ಲಿದ್ದ ಸುಮಾರು 70 ಲಕ್ಷ ರೂಪಾಯಿ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈಗಾಗಲೇ ಬಂಧಿತ ಏಳು ಶಂಕಿತ ಭಯೋತ್ಪಾದಕರಿಂದ ಪಡೆದ ಮಾಹಿತಿ ಆಧಾರದ ಮೇಲೆ ಈ ಜಾಲವನ್ನು ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಭೇದಿಸಿದೆ ಎಂದು ಪೊಲೀಸರು ಅಧಿಕಾರಿಗಳು ಮಾಹಿತಿ ಒದಗಿಸಿದ್ದಾರೆ.
ಸೋಮವಾರ ಎಟಿಎಸ್ ತಂಡದೊಂದಿಗೆ ಶಿಕಾರ್‌ಪುರ ಪೊಲೀಸರು ಶಂಕಿತ ಉಗ್ರ ಇಝಾರುಲ್ ವಾಸವಿದ್ದ ರೂಪೌಲಿಯಾ ಮನೆ ಮೇಲೆ ದಾಳಿ ನಡೆಸಿದ್ದರು. ಮನೆಯಲ್ಲಿ ಇಝೂರುಲ್ ಮದ್ಯ ಸೇವಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದನು. ಆರೋಪಿಯನ್ನು ಬೆಟ್ಟೈಹ್ ಜೈಲಿಗಟ್ಟಲಾಗಿದೆ.
ಮತ್ತೊಬ್ಬ ಶಂಕಿತ ಉಗ್ರ ರಿಯಾಜುದ್ದೀನ್ ಕೌಟುಂಬಿಕ ಕಲಹದ ನಂತರ ಹಾಪುರ್ ಜಿಲ್ಲೆಯ ಪಿಲ್ಖುವಾ ಪಟ್ಟಣದಲ್ಲಿ ವಾಸಿಸುತ್ತಿದ್ದು, ಕಳೆದೊಂದು ವರ್ಷದಿಂದ ಮಷಿನ್‌ಮ್ಯಾನ್ ಆಗಿ ದೆಹಲಿಯ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ. ಅಲ್ಲಿ ರಿಯಾಜುದ್ದೀನ್ ಬ್ಯಾಂಕ್ ಖಾತೆ ತೆರೆಯಲು ಇಝರುಲ್ ಸಹಾಯ ಒದಗಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಅಕ್ಟೋಬರ್ 21ರಂದು ರಾಷ್ಟ್ರೀಯ ಪೊಲೀಸ್ ಸ್ಮಾರಕದಲ್ಲಿ ಪೊಲೀಸ್ ಸ್ಮರಣಾರ್ಥ ದಿನದಂದು ಹುತಾತ್ಮರಿಗೆ ಗೌರವ ನಮನ ಸಲ್ಲಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡಿ, ಈಶಾನ್ಯದಲ್ಲಿ ಭಯೋತ್ಪಾದನೆ, ಎಡಪಂಥೀಯ ಉಗ್ರವಾದ ಮತ್ತು ಬಂಡಾಯದ ಘಟನೆಗಳಲ್ಲಿ ಶೇ.65ರಷ್ಟು ಇಳಿಕೆಯಾಗಿದೆ. ದೇಶದ ಮೂರು ಹಾಟ್ಸ್ಪಾಟ್ಗಳಾದ ಎಲ್ಡಬ್ಲ್ಯೂಇ (ಎಡಪಂಥೀಯ ಉಗ್ರಗಾಮಿ ಪೀಡಿತ ರಾಜ್ಯಗಳು) ಈಶಾನ್ಯ, ಜಮ್ಮು ಮತ್ತು ಕಾಶ್ಮೀರ ರಾಜ್ಯಗಳು ಶಾಂತಿ ಮರುಸ್ಥಾಪನೆಯಾಗುತ್ತಿದೆ. ಭಯೋತ್ಪಾದನೆಯ ವಿರುದ್ದ ಶೂನ್ಯ ಸಹಿಷ್ಣುತೆ ನೀತಿಯನ್ನು ಉಳಿಸಿಕೊಂಡು ನರೇಂದ್ರ ಮೋದಿ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಪೊಲೀಸ್ ಪಡೆಯ ಆಧುನೀಕರಣಕ್ಕಾಗಿ 'ಪೊಲೀಸ್ ಟೆಕ್ನಾಲಜಿ ಮಿಷನ್' ಸ್ಥಾಪಿಸುವ ಮೂಲಕ ಸರ್ಕಾರವು ವಿಶ್ವದ ಅತ್ಯುತ್ತಮ ಭಯೋತ್ಪಾದನಾ ನಿಗ್ರಹ ಪಡೆಯನ್ನು ಹೊಂದುವ ನಿಟ್ಟಿನಲ್ಲಿ ಕೆಲಸ ಮಾಡಿದೆ ಎಂದು ಶಾ ಹೇಳಿದ್ದರು.
ಇದನ್ನೂ ಓದಿ: ಈಶಾನ್ಯ ಭಾರತದಲ್ಲಿ ಭಯೋತ್ಪಾದನೆ, ಎಡಪಂಥೀಯ ಉಗ್ರವಾದ, ಬಂಡಾಯ ಶೇ.65 ರಷ್ಟು ತಗ್ಗಿದೆ: ಅಮಿತ್ ಶಾ