ನವದೆಹಲಿ: ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ(ಜೆಎನ್‌ಯು) ಯಾವುದಾದರೊಂದು ವಿವಾದಕ್ಕಾಗಿ ಸುದ್ದಿಯಲ್ಲಿರುತ್ತದೆ. ಇಂದು ಶ್ರೀರಾಮನವಮಿ ಹಿನ್ನೆಲೆಯಲ್ಲಿ ಮಾಂಸಾಹಾರ ಸೇವನೆ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಎರಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆದಿದೆ. ಪರಿಣಾಮ, 50 ರಿಂದ 60 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮತ್ತು ಎಡಪಂಥೀಯ ವಿದ್ಯಾರ್ಥಿ ಸಂಘಟನೆಯ ಮಧ್ಯೆ ಈ ಗಲಾಟೆ ನಡೆದಿದೆ. ಕಾಲೇಜಿನ ಹಾಸ್ಟೆಲ್ನಲ್ಲಿ ನೀಡಲಾಗುವ ಊಟದಲ್ಲಿ ರಾಮನವಮಿ ಹಿನ್ನೆಲೆಯಲ್ಲಿ ಮಾಂಸ ನೀಡಬಾರದು ಎಂದು ಎಬಿವಿಪಿ ಸೂಚಿಸಿದೆ. ಈ ವೇಳೆ ಎಡಪಂಥೀಯ ಸಂಘಟನೆಯ ವಿದ್ಯಾರ್ಥಿಗಳು ಊಟದ ಮೆನುವಿನಲ್ಲಿ ಯಾವುದೇ ಬದಲಾವಣೆ ಮಾಡಬಾರದು ಎಂದು ಪಟ್ಟು ಹಿಡಿದಿದ್ದಾರೆ. ಈ ವೇಳೆ ಎರಡು ಗುಂಪುಗಳ ಮಧ್ಯೆ ಹೊಡೆದಾಟ ನಡೆದಿದ್ದು, ಎರಡೂ ಕಡೆಯ ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
'ರಾಮನವಮಿ ಆಚರಣೆಯ ಕಾರಣ ಮಾಂಸಾಹಾರವನ್ನು ನಿಷೇಧಿಸಬೇಕು ಎಂದು ಎಬಿವಿಪಿ ಸಂಘಟನೆಯ ಪರವಾದ ವಿದ್ಯಾರ್ಥಿಗಳು ನೀಡಿದ ಕರೆಯನ್ನು ಇತರ ವಿದ್ಯಾರ್ಥಿಗಳು ವಿರೋಧಿಸಿದ್ದರಿಂದ ಗಲಾಟೆ ನಡೆದಿದೆ. 50- 60 ಜನರು ಗಾಯಗೊಂಡಿದ್ದಾರೆ' ಎಂದು ಪಿಎಚ್‌ಡಿ ವಿದ್ಯಾರ್ಥಿನಿ ಮತ್ತು ಜೆಎನ್‌ಯುಎಸ್‌ಯು ಮಾಜಿ ಉಪಾಧ್ಯಕ್ಷ ಸಾರಿಕಾ ಹೇಳುತ್ತಾರೆ.
'ರಾಮನವಮಿಯಂದು ವಿಶ್ವವಿದ್ಯಾನಿಲಯದಲ್ಲಿ ಪೂಜೆಯ ಸಂದರ್ಭದಲ್ಲಿ ಎಡ ಮತ್ತು ಎನ್ಎಸ್ಯುಐ ಕಾರ್ಯಕರ್ತರು ಗದ್ದಲ ಸೃಷ್ಟಿಸಿದರು. ರಾಮನವಮಿ ಆಚರಣೆ ಮಾಡಲು ಅಡ್ಡಿ ಉಂಟು ಮಾಡಿದರು. ಮಾಂಸಾಹಾರಕ್ಕಾಗಿ ಈ ಗಲಾಟೆ ನಡೆದಿಲ್ಲ' ಎಂದು ಎಬಿವಿಪಿಯ ಜೆಎನ್‌ಯು ವಿಭಾಗದ ಅಧ್ಯಕ್ಷ ರೋಹಿತ್ ಕುಮಾರ್ ತಿಳಿಸಿದ್ದಾರೆ.
ಗಲಾಟೆ ನಡೆದ ಬಳಿಕ ಪೊಲೀಸರು ದೌಡಾಯಿಸಿದ್ದು, ಈ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ. ಆದರೆ, ವಿವಿಯ ಯಾವೊಬ್ಬ ಅಧಿಕಾರಿಯೂ ಈ ಬಗ್ಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ.
ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಸತಿಯ ಚಿತೆಗೆ ಹಾರಿದ ಪತಿ!