ಕೇದಾರನಾಥ(ಉತ್ತರಾಖಂಡ): ಎರಡು ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಾಖಂಡ ಪ್ರವಾಸದ ವೇಳೆ ವಿಶ್ವಖ್ಯಾತಿಯ ಕೇದಾರನಾಥ, ಬದರಿನಾಥ ದೇವಾಲಯಕ್ಕೆ ಭೇಟಿ ನೀಡಿ, ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದರು. ಈ ವೇಳೆ ಅವರು ಕೇದಾರನಾಥ ದೇಗುಲ ಮುಂದೆ ತೆಗೆಸಿಕೊಂಡ ಫೋಟೋ ಟೀಕೆಗೆ ಗುರಿಯಾಗಿದೆ.
ಕೇದಾರನಾಥ ದೇವಾಲಯದ ಹೊರಗೆ ಪ್ರಧಾನಿ ನರೇಂದ್ರ ಮೋದಿ ನಿಂತ ಫೋಟೋವನ್ನು ಸಿಪಿಐ-ಎಂ ಟ್ವೀಟ್ ಮಾಡಿ ಟೀಕಿಸಿದೆ. ಇದಕ್ಕೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ.
"ಪ್ರಧಾನಿ ಮೋದಿ ಅವರು ಕೇದಾರನಾಥ ದೇಗುಲಕ್ಕಿಂತ ದೊಡ್ಡದಾಗಿ ಕಾಣಿಸುವ ಕ್ಯಾಮರಾ ಕೋನದಲ್ಲಿ ಚಿತ್ರವನ್ನು ತೆಗೆಯಲಾಗಿದೆ. ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾದ ಕೇದಾರನಾಥದಲ್ಲಿನ ಶಿವನ ದೇಗುಲವನ್ನು ಮೋದಿಗಿಂತಲೂ ಚಿಕ್ಕದಾಗಿ ತೋರಿಸಲಾಗಿದೆ. ಇದು ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತದೆ. ಶಿವನ ಪವಿತ್ರ ಹಿಂದೂ ದೇವಾಲಯ ಮೋದಿಯ ಹಿಂದೆ ಮರೆಯಾಗಿದೆ" ಎಂದು ಆಕ್ಷೇಪಿಸಲಾಗಿದೆ.
ದೇವಾಲಯವನ್ನು ಕಡಿಮೆ ಕೋನದಲ್ಲಿ ತೋರಿಸಿ ತೆಗೆಯಲಾದ ಚಿತ್ರದಲ್ಲಿ ಮೋದಿ ಕೈ ಬೀಸುತ್ತಿದ್ದು, ಹಿಂಬದಿ ದೇವಾಲಯ ಅಸ್ಪಷ್ಟವಾಗಿ ಗೋಚರಿಸುತ್ತಿದೆ. ಕೇದಾರನಾಥ ಭೇಟಿ ಬಳಿಕ ಮೋದಿ ಟೀಕೆಗೆ ಗುರಿಯಾಗುತ್ತಿರುವುದು ಇದೇ ಕಾರಣಕ್ಕಾಗಿ. ಇದಕ್ಕೂ ಮೊದಲು ಹಿಮಾಚಲ ಪ್ರದೇಶದ ಸಾಂಪ್ರದಾಯಿಕ ಉಡುಗೆಯಾದ 'ಚೋಲಾ ಡೋರಾ'ವನ್ನು ಪ್ರಧಾನಿ ಮೋದಿ ತೊಟ್ಟಿದ್ದರ ಬಗ್ಗೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿತ್ತು.
"ಪ್ರಧಾನಿಯ ಉಡುಪಿನ ಹಿಂಭಾಗದಲ್ಲಿ ಸ್ವಸ್ತಿಕ್ ಚಿಹ್ನೆ ಇದೆ. ಇದು ಅಶುಭ ಮತ್ತು ಆಕ್ಷೇಪಾರ್ಹವಾಗಿದೆ ಎಂದು ಟೀಕಿಸಿತ್ತು. ಉತ್ತರಾಖಂಡ ಪ್ರವಾಸದ ವೇಳೆ ಮೋದಿ ಅವರು, ಕೇದಾರನಾಥನಿಗೆ ವಿಶೇಷ ಪೂಜೆ ಸಲ್ಲಿಸಿದರು. ಬದರಿನಾಥಕ್ಕೂ ಭೇಟಿ ನೀಡಿದ ಬಳಿಕ ಹೇಮಕುಂಡ್ ಸಾಹಿಬ್ ರೋಪ್‌ವೇ ಮತ್ತು ಕೆಲವೊಂದು ರಸ್ತೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.
ಓದಿ: ಸರ್ಕಾರಿ ಶಾಲೆಗಳಿಗೆ ಪೋಷಕರಿಂದ ದೇಣಿಗೆ: 48 ಗಂಟೆಯಲ್ಲಿ ಸುತ್ತೋಲೆ ಹಿಂಪಡೆದ ಶಿಕ್ಷಣ ಇಲಾಖೆ