ನವದೆಹಲಿ: ಇಲ್ಲಿನ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಮಾಂಸಾಹಾರದ ವಿಚಾರವಾಗಿ ಆರಂಭವಾದ ವಿವಾದ ತಡರಾತ್ರಿ ರಕ್ತಸಿಕ್ತ ಘರ್ಷಣೆಗೆ ತಿರುಗಿದೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮತ್ತು ಎಡಪಂಥಿಯ ವಿದ್ಯಾರ್ಥಿ ಸಂಘಟನೆಯ ಕಾರ್ಯಕರ್ತರು ಪರಸ್ಪರ ಘರ್ಷಣೆ ನಡೆಸಿದ್ದು, ಎರಡೂ ತಂಡದ ವಿದ್ಯಾರ್ಥಿಗಳು ತೀವ್ರ ಗಾಯಗೊಂಡಿದ್ದಾರೆ. ಪೊಲೀಸ್ ಮೂಲಗಳು 6 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದಿದ್ದರೆ, ವಿದ್ಯಾರ್ಥಿ ಸಂಘಟನೆಗಳ ಪ್ರಕಾರ, 50 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎನ್ನಲಾಗ್ತಿದೆ.
ಏನಿದು ಘಟನೆ: ಕಾವೇರಿ ಹಾಸ್ಟೆಲ್‌ನ ಮೆಸ್‌ನಲ್ಲಿ ಮಾಂಸಾಹಾರ ನೀಡುವುದಕ್ಕೆ ಸಂಬಂಧಿಸಿದಂತೆ ಭಾನುವಾರ ಬೆಳಗ್ಗೆಯಿಂದಲೇ ಜಗಳ ಶುರುವಾಗಿತ್ತು. ಭಾನುವಾರವಾಗಿದ್ದರಿಂದ ಮೆಸ್‌ನಲ್ಲಿ ಈ ದಿನ ಸಸ್ಯಾಹಾರಿ ಮತ್ತು ಮಾಂಸಾಹಾರಿ ಆಹಾರವನ್ನು ತಯಾರಿಸಲಾಗುತ್ತದೆ. ಕಾವೇರಿ ಹಾಸ್ಟೆಲ್‌ನಲ್ಲಿ ಕೆಲವು ಬಲಪಂಥೀಯ ವಿದ್ಯಾರ್ಥಿಗಳು ನವರಾತ್ರಿ ಪೂಜೆ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ವಿದ್ಯಾರ್ಥಿಗಳು ನವರಾತ್ರಿ ಹಿನ್ನೆಲೆ ಮೆಸ್‌ನಲ್ಲಿ ಮಾಂಸಾಹಾರ ಆಹಾರವನ್ನು ನೀಡದಂತೆ ಮೆಸ್ ಮೇಲ್ವಿಚಾರಕರಿಗೆ ಒತ್ತಾಯಿಸಿದ್ದರು ಎನ್ನಲಾಗ್ತಿದೆ.
ಕಾಲೇಜ್ಗೆ ಬಂದ ಮಾಂಸ: ಆದರೆ ಭಾನುವಾರ ಮಾಂಸ ಪೂರೈಕೆದಾರರು ಮಾಂಸದೊಂದಿಗೆ ಮೆಸ್‌ಗೆ ತಲುಪಿದ್ದರು. ಇದರ ಮೇಲೆ ಬಲಪಂಥೀಯ ವಿದ್ಯಾರ್ಥಿಗಳು ಅವರೊಂದಿಗೆ ಗಲಾಟೆ ಮಾಡಿದರು. ಬಳಿಕ ಮಾಂಸವನ್ನು ಹಿಂದಕ್ಕೆ ತೆಗೆದುಕೊಂಡು ಹೋಗುವಂತೆ ಕೇಳಲು ಪ್ರಾರಂಭಿಸಿದರು. ನಂತರ ಎಡಪಂಥೀಯ ವಿದ್ಯಾರ್ಥಿಗಳು ಮಾಂಸ ಪೂರೈಕೆದಾರರ ಪರವಾಗಿ ನಿಂತರು. ಅವರು ಮೆಸ್‌ನಲ್ಲಿ ಮಾಂಸಾಹಾರ ನೀಡಿ ಎಂದು ಒತ್ತಾಯಿಸಲು ಪ್ರಾರಂಭಿಸಿದರು.
ಮಾಂಸ ವಾಪಸ್: ಮತ್ತೆ ಈ ವಿಚಾರವಾಗಿ ಬಲಪಂಥೀಯ ಮತ್ತು ಎಡಪಂಥೀಯ ವಿದ್ಯಾರ್ಥಿಗಳ ನಡುವೆ ವಾಗ್ವಾದ ಹೆಚ್ಚಿತು. ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿತು. ಅಲ್ಲಿದ್ದ ಕೆಲ ವಿದ್ಯಾರ್ಥಿಗಳು ಮಧ್ಯ ಪ್ರವೇಶಿಸಿ, ಸಮಾಧಾನಪಡಿಸಿ ಎರಡು ಗುಂಪುಗಳನ್ನು ಬೇರ್ಪಡಿಸಿದರು. ಅಷ್ಟರಲ್ಲಿ ಮಾಂಸ ಪೂರೈಕೆದಾರರು ಮಾಂಸದೊಂದಿಗೆ ಹಿಂತಿರುಗಿದರು.
ಸಂಜೆ ಮೀಟಿಂಗ್ನಲ್ಲಿ ರಕ್ತಸಿಕ್ತ ಹೊಡೆದಾಟ: ಮಧ್ಯಾಹ್ನದ ವೇಳೆಗೆ ಎರಡು ವಿದ್ಯಾರ್ಥಿ ಸಂಘಟನೆಗಳ ನಡುವೆ ಮಾಂಸಾಹಾರದ ವಿಚಾರವಾಗಿ ಆರಂಭವಾದ ವಾಗ್ವಾದದಿಂದಾಗಿ ಕ್ಯಾಂಪಸ್‌ನಲ್ಲಿ ಸ್ವಲ್ಪ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಇದೇ ವೇಳೆ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ವತಿಯಿಂದ ವಿದ್ಯಾರ್ಥಿ ಕೇಂದ್ರದಲ್ಲಿ ಸಂಜೆ ಸಭೆ ಕರೆಯಲಾಗಿತ್ತು. ಈ ಸಂದರ್ಭದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮತ್ತು ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ಇದು ರಕ್ತಸಿಕ್ತ ಘರ್ಷಣೆಯಾಗಿ ಮಾರ್ಪಟ್ಟಿತ್ತು. ಘಟನೆಯಲ್ಲಿ ಎರಡೂ ಕಡೆಯ ವಿದ್ಯಾರ್ಥಿ ಸಂಘದ ಕಾರ್ಯಕರ್ತರು ಗಾಯಗೊಂಡರು.
ನೋ ಕಮೆಂಟ್ಸ್: ಈ ಸಂಪೂರ್ಣ ವಿಷಯದ ಬಗ್ಗೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿಗೆ ದೂರು ನೀಡಲಾಗಿದೆ ಎಂದು ಎಡಪಂಥೀಯ ವಿದ್ಯಾರ್ಥಿ ಸಂಘಟನೆ ಹೇಳಿದೆ. ಸುದ್ದಿ ತಿಳಿದಾಕ್ಷಣ ದೆಹಲಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿದರು. ಈ ಸಂಪೂರ್ಣ ಘಟನೆಯ ಬಗ್ಗೆ ವಿಶ್ವವಿದ್ಯಾಲಯದ ಆಡಳಿತವನ್ನು ಸಂಪರ್ಕಿಸಲು ಪ್ರಯತ್ನಿಸಿದ್ರೂ ಪ್ರಯೋಜನವಾಗಿಲ್ಲ. ಈ ಘಟನೆ ಬಗ್ಗೆ ಯಾವುದೇ ಅಧಿಕಾರಿಯೂ ಬಾಯ್ಬಿಟ್ಟಿಲ್ಲ.
ಜಗಳಕ್ಕೆ ಮಾಂಸಹಾರವೇ ಕಾರಣ!: ಭಾನುವಾರ ಹಾಸ್ಟೆಲ್ ಮೆಸ್‌ನ ಮೆನುವಿನಲ್ಲಿ ವೆಜ್ ಮತ್ತು ನಾನ್ ವೆಜ್ ಎರಡನ್ನೂ ಮಾಡಲು ನಿರ್ಧರಿಸಿರುವಾಗ, ಈ ಎರಡೂ ಆಹಾರಗಳನ್ನು ಏಕೆ ಮಾಡಲಾಗುವುದಿಲ್ಲ ಎಂದು ಎಡ ಗುಂಪಿನ ವಿದ್ಯಾರ್ಥಿಗಳು ಪ್ರಶ್ನಿಸಿದ್ದಾರೆ. ಮತ್ತೊಂದೆಡೆ ಕಳೆದ ಒಂಬತ್ತು ದಿನಗಳಿಂದ ಹಾಸ್ಟೆಲ್‌ನಲ್ಲಿ ನವರಾತ್ರಿ ಪೂಜೆ ನಡೆಯುತ್ತಿದ್ದು, ಇಂದು ರಾಮನವಮಿ ಆಗಿದ್ದ ಹಿನ್ನೆಲೆ ಇಲ್ಲಿ ಮಾಂಸಾಹಾರ ತಯಾರಿಸುವುದು ಹೇಗೆ ಎಂದು ಬಲಪಂಥೀಯ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಪ್ರತಿಭಟನೆ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ ವಿದ್ಯಾರ್ಥಿಗಳು ಸಾಬರಮತಿ ಧಾಬಾದಿಂದ ವಸಂತ್ ಕುಂಜ್ ಉತ್ತರ ಪೊಲೀಸ್ ಠಾಣೆವರೆಗೆ ಪ್ರತಿಭಟನೆ ನಡೆಸಿದರು. ದೂರು ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಪಿ ತಿಳಿಸಿದ್ದಾರೆ.
ಒಟ್ಟಿನಲ್ಲಿ ಮಾಂಸಾಹಾರ ವಿಚಾರಕ್ಕೆ ಎರಡು ಗುಂಪುಗಳು ಹೊಡೆದಾಡಿಕೊಂಡಿದ್ದಾರೆ ಎಂಬ ಮಾಹಿತಿ ಇದೆ. ಆದ್ರೆ ಈ ಘಟನೆಯಲ್ಲಿ ಮಧ್ಯೆ ಪ್ರವೇಶಿಸಿರುವ ಪೊಲೀಸರು ಜಗಳದ ಬಗ್ಗೆ ತನಿಖೆ ಮಾಡಿ ಸತ್ಯಾಸತ್ಯತೆಯನ್ನು ಬಯಲು ಮಾಡಬೇಕಿದೆ.