ಕೋಲ್ಕತ್ತಾ (ಪಶ್ಚಿಮ ಬಂಗಾಳ): ಇಲ್ಲಿನ ಬಿಧಾನಗರದಲ್ಲಿ ಪಶ್ಚಿಮ ಬಂಗಾಳ ಶಿಕ್ಷಣ ಇಲಾಖೆ ಕಚೇರಿ ಇರುವ ಕಟ್ಟಡದ ಬಿಕಾಶ್ ಭವನದ ಮುಂದೆ ಮಂಗಳವಾರ ಪ್ರಾಥಮಿಕ ಶಾಲೆಗಳ ಐವರು ಮಹಿಳಾ ಗುತ್ತಿಗೆ ಶಿಕ್ಷಕಿಯರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ವರದಿಯಾಗಿದೆ.
ಶಿಕ್ಷಕ ಒಕ್ಯ ಮುಕ್ತಮಂಚ್ (ಶಿಕ್ಷಕರ ಐಕ್ಯತೆ ಮುಕ್ತ ವೇದಿಕೆ), ರಾಜ್ಯದ ಗುತ್ತಿಗೆ ಶಿಕ್ಷಕರ ಸಂಘದ ಕಾರ್ಯಕರ್ತರು ಬಿಕಾಶ್ ಭವನದ ಮುಂದೆ ಪ್ರತಿಭಟನೆ ನಡೆಸುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಕೂಡಲೇ ಬಿಧಾನಗರ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಬಂದರು. ಪೊಲೀಸರು ಅವರನ್ನು ಸ್ಥಳದಿಂದ ಬೇರೆಡೆಗೆ ಸ್ಥಳಾಂತರಿಸಲು ಪ್ರಯತ್ನಿಸಿದಾಗ, ವಾಗ್ವಾದ ನಡೆಯಿತು. ಬಳಿಕ ಐದು ಮಹಿಳಾ ಶಿಕ್ಷಕಿಯರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದರು.
ತ್ವರಿತವಾಗಿ ಅವರನ್ನು ಬಿಧಾನಗರ ಉಪ ವಿಭಾಗೀಯ ಆಸ್ಪತ್ರೆಗೆ ರವಾನಿಸಲಾಯಿತು. ಅವರು ಈಗ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಐವರು ಶಿಕ್ಷಕಿಯರು ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ನಿವಾಸಿಗಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಗುತ್ತಿಗೆ ಶಿಕ್ಷಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅವರು ರಾಜ್ಯ ಶಿಕ್ಷಣ ಇಲಾಖೆ ಕಚೇರಿ ಎದುರು ಪ್ರತಿಭಟನೆ ಮಾಡುತ್ತಿದ್ದರು.
ಓದಿ: Video: 'ಊಟ ಮಾಡುತ್ತ ಕುಳಿತಿದ್ದ ಕೇಂದ್ರ ಸಚಿವ ರಾಣೆಯನ್ನ ಅರೆಸ್ಟ್ ಮಾಡಿದ್ರು' - ಬಿಜೆಪಿ ಕಿಡಿ