ತಿರುಪತಿ: ಭಾರತದಾದ್ಯಂತ ದೇವಾಲಯಗಳ ನಿರ್ಮಾಣವನ್ನು ವೇಗಗೊಳಿಸುವುದಾಗಿ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮಾಹಿತಿ ನೀಡಿದೆ. ಈ ನಿಟ್ಟಿನಲ್ಲಿ ಒಂದು ವರ್ಷದಲ್ಲಿ 500 ದೇವಾಲಯಗಳ ನಿರ್ಮಾಣ ಮಾಡಲಾಗುತ್ತದೆ ಎಂದು ಟಿಟಿಡಿ ಅಧ್ಯಕ್ಷ ವೈ.ವಿ.ಸುಬ್ಬಾರೆಡ್ಡಿ ಮಾಹಿತಿ ನೀಡಿದರು.
ತಾವು ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ) ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಎರಡು ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ಜಮ್ಮು ಕಾಶ್ಮೀರದಿಂದ ಕನ್ಯಾ ಕುಮಾರಿವರೆಗೆ ದೇವಾಲಯಗಳನ್ನು ನಿರ್ಮಿಸಲಾಗುತ್ತದೆ. ಈಗಾಗಲೇ ಜಮ್ಮುಕಾಶ್ಮೀರದ ಮಜ್ಹಿನ್ ಗ್ರಾಮದಲ್ಲಿ ಬಾಲಾಜಿ ದೇವಾಲಯಕ್ಕೆ ಶಂಕುಸ್ಥಾಪನೆ ಮಾಡಲಾಗಿದೆ ಎಂದರು.
ಸಮರಸ್ತಾ ಫೌಂಡೇಷನ್ ಮತ್ತು ದತ್ತಿ ಇಲಾಖೆ ಎರಡು ವರ್ಷಗಳ ಹಿಂದೆ ಹಲವು ಯೋಜನೆಗಳನ್ನು ರೂಪಿಸಿದ್ದು, ಕೊರೊನಾ ಸಾಂಕ್ರಾಮಿಕದ ಕಾರಣದಿಂದಾಗಿ ಅವುಗಳನ್ನು ಕಾರ್ಯಗತಗೊಳಿಸಲಾಗಿಲ್ಲ. ಹಿಂದುಳಿದ ಪ್ರದೇಶಗಳ ದೇವಾಲಯ ನಿರ್ಮಾಣ ಮತ್ತು ನವೀಕರಣಕ್ಕಾಗಿ ಶ್ರೀವಾಣಿ ಟ್ರಸ್ಟ್ ಹಣವನ್ನು ಬಳಸಿಕೊಳ್ಳಲಾಗುತ್ತದೆ ಎಂದು ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.
ಕನ್ನಡದಲ್ಲಿ ಭಕ್ತಿ ಚಾನೆಲ್
ಈಗಾಗಲೇ ಟಿಟಿಡಿಯಿಂದ ಶ್ರೀವೆಂಕಟೇಶ್ವರ ಭಕ್ತಿ ಚಾನೆಲ್ (ಎಸ್ವಿಬಿಸಿ) ನಡೆಸಲಾಗುತ್ತಿದ್ದು, ಕನ್ನಡ ಮತ್ತು ಹಿಂದಿ ಭಾಷೆಯಲ್ಲೂ ಆಧ್ಯಾತ್ಮಿಕ ಚಾನೆಲ್ಗಳನ್ನು ಎರಡು ಅಥವಾ ಮೂರು ತಿಂಗಳಲ್ಲಿ ಆರಂಭ ಮಾಡಲಾಗುತ್ತದೆ ಎಂದು ಸುಬ್ಬಾ ರೆಡ್ಡಿ ಹೇಳಿದ್ದಾರೆ.
ಟಿಟಿಡಿಗೆ ನೌಕರರನ್ನು ಗುತ್ತಿಗೆ ಪಡೆಯಲು ಸಮಿತಿಯನ್ನು ರಚಿಸಲಾಗುವುದು ಎಂದ ಅವರು ತಿರುಮಲದಲ್ಲಿರುವ ಅನಧಿಕೃತ ಅಂಗಡಿಗಳನ್ನು ತೆಗೆದುಹಾಕುವುದಲ್ಲದೇ, 13 ವಿವಾಹ ಸಭಾಂಗಣಗಳನ್ನು ಮತ್ತು ತಿರುಪತಿಯಲ್ಲಿ ಮಕ್ಕಳ ಆಸ್ಪತ್ರೆಯನ್ನು ನಿರ್ಮಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಇದನ್ನೂ ಓದಿ: ನಾಳೆ ವಿಶ್ವ ಯೋಗ ದಿನ: ಸಾಮಾಜಿಕ ಮಾಧ್ಯಮವೇ ವೇದಿಕೆ; ಈ ವೆಬ್ಸೈಟ್ ಮೂಲಕ ನೀವೂ ಭಾಗಿಯಾಗಿ..
ಇದರ ಜೊತೆಗೆ ಸಾವಯವ ಕೃಷಿಯನ್ನು ಹೆಚ್ಚಿಸಲಾಗುವುದು ಮತ್ತು ಸಾವಯವ ಬೆಳೆಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದು. 'ಗುಡಿಕೊ ಗೋಮಾತಾ' ಯೋಜನೆಯಡಿ ದೇಶದಾದ್ಯಂತ 100 ದೇವಾಲಯಗಳಿಗೆ ಹಸುಗಳನ್ನು ದಾನ ಮಾಡಲಾಗಿದೆ ಎಂದು ಸುಬ್ಬಾರೆಡ್ಡಿ ಮಾಹಿತಿ ನೀಡಿದರು.