ಕೋಲ್ಕತಾ: ಭವಾನಿಪುರ ಉಪಚುನಾವಣೆಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ ಎಂದು ಈ ಹಿಂದೆ ಹೇಳಿದ್ದ ಕಾಂಗ್ರೆಸ್ ಇದೀಗ ಯೂ-ಟರ್ನ್ ಹೊಡೆದಿದೆ. ತೃಣಮೂಲ ಕಾಂಗ್ರೆಸ್ ನಾಯಕಿ ವಿರುದ್ಧ ಪಕ್ಷ ಯಾರನ್ನೂ ಕಣಕ್ಕಿಳಿಸುವುದಿಲ್ಲ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
"ಸೆಪ್ಟೆಂಬರ್ 30ರಂದು ನಡೆಯಲಿರುವ ಉಪಚುನಾವಣೆಯ ಸಂದರ್ಭದಲ್ಲಿ ಬ್ಯಾನರ್ಜಿ ವಿರುದ್ಧವಾಗಿ ಕಾಂಗ್ರೆಸ್ನ ಅಭ್ಯರ್ಥಿಯನ್ನು ನಿಲ್ಲಿಸುವುದಿಲ್ಲ. ಅಂತೆಯೇ ಅವರ ವಿರುದ್ಧ ಪ್ರಚಾರ ಮಾಡುವುದಿಲ್ಲ" ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಅವರು ಬಹರಂಪುರದಲ್ಲಿ ತಿಳಿಸಿದ್ದಾರೆ.
ಸೋಮವಾರದಂದು ಚೌಧರಿ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, "ಭವಾನಿಪುರದಲ್ಲಿ ಬ್ಯಾನರ್ಜಿ ವಿರುದ್ಧ ಕಾಂಗ್ರೆಸ್ ಪಕ್ಷವು ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತದೆ. ಪಿಸಿಸಿ ಸದಸ್ಯರಲ್ಲಿ ಹೆಚ್ಚಿನವರು ಈ ನಿರ್ಧಾರದ ಪರವಾಗಿದ್ದಾರೆ" ಎಂದು ಹೇಳಿದ್ದರು.
ವಿಧಾನಸಭೆ ಚುನಾವಣೆ ನಡೆದು ಕೆಲ ತಿಂಗಳ ಬಳಿಕ ಪಶ್ಚಿಮ ಬಂಗಾಳದಲ್ಲಿ ಉಪ ಚುನಾವಣೆ ಘೋಷಣೆ ಆಗಿದೆ. ನಂದಿಗ್ರಾಮದಲ್ಲಿ ಸೋಲು ಅನುಭವಿಸಿರುವ ಸಿಎಂ ಮಮತಾ ಬ್ಯಾನರ್ಜಿ ಈ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲಲೇಬೇಕಿದೆ. ಭವಾನಿಪುರ ವಿಧಾನಸಭಾ ಕ್ಷೇತ್ರದಿಂದ ಮಮತಾ ಬ್ಯಾನರ್ಜಿ ಸ್ಪರ್ಧಿಸುತ್ತಿದ್ದು, ಚುನಾವಣಾ ಕಣ ರಂಗೇರಿದೆ. ಈ ಚುನಾವಣೆಯಲ್ಲಿ ಮಮತಾ ಗೆಲ್ಲಲೇಬೇಕಿದೆ.
ಒಂದೊಮ್ಮೆ ಇಲ್ಲಿ ಬ್ಯಾನರ್ಜಿ ಸೋತರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ. ಹಾಗಾಗಿ ಇದು ದೀದಿಗೆ ಪ್ರತಿಷ್ಠೆಯ ಕಣವಾಗಿದೆ.