ನವದೆಹಲಿ: ಕಾನೂನಿನ ಪ್ರಕಾರ 12 ಶಾಸಕರನ್ನು ಅನರ್ಹಗೊಳಿಸದೇ ಮಣಿಪುರ ಸರ್ಕಾರ 'ರಾಜ ಧರ್ಮ'ವನ್ನು ಮಣ್ಣುಪಾಲು ಮಾಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಮಣಿಪುರದಲ್ಲಿ ಬಿಜೆಪಿ ಕೃತಕ ಬಹುಮತವನ್ನು ಸೃಷ್ಟಿಸುವ ಮೂಲಕ "ಅಸಂವಿಧಾನಿಕ" ಸರ್ಕಾರ ನಡೆಸುತ್ತಿದೆ. ಈ ಮೂಲಕ ಪ್ರಜಾಪ್ರಭುತ್ವವನ್ನು "ವಿರೂಪಗೊಳಿಸುತ್ತಿದೆ" ಎಂದು ಆರೋಪಿಸಿದೆ. ಲಾಭದಾಯಕ ಹುದ್ದೆ ಹೊಂದಿರುವ ಆರೋಪ ಎದುರಿಸುತ್ತಿರುವ ಸುಮಾರು 12 ಬಿಜೆಪಿ ಎಂಎಲ್ಎಗಳ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯಪಾಲೆ ನಜ್ಮಾ ಹೆಪ್ತುಲ್ಲಾ ತಡ ಮಾಡುತ್ತಿದ್ದಾರೆ. ಈ ಮೂಲಕ ಅವರು ಬಿಜೆಪಿ ಎಂಎಲ್ಎಗಳ ರಕ್ಷಣೆಗೆ ನಿಂತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಸಂಬಂಧ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಹಿರಿಯ ನಾಯಕ ಅಭಿಷೇಕ್ ಮನು ಸಿಂಘ್ವಿ, ಉದ್ದೇಶಪೂರ್ವಕವಾಗಿ ಕ್ರಮ ಕೈಗೊಳ್ಳಲು ವಿಳಂಬ ಮಾಡಲಾಗುತ್ತಿದೆ. ಕೃತಕ ಬಹುಮತ ಸೃಷ್ಟಿಸಿ, ಪ್ರಜಾಪ್ರಭುತ್ವವನ್ನು ವಿಳಂಬ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. 12 ಬಿಜೆಪಿ ಶಾಸಕರನ್ನು ಅನರ್ಹಗೊಳಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ಟ್ವೀಟ್ ಮಾಡಿದ್ದು, ಮಣಿಪುರ ರಾಜ್ಯಪಾಲರು ಅಗತ್ಯ ಕ್ರಮ ಕೈಗೊಳ್ಳಲು ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ.