ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿ ಕಾಂಗ್ರೆಸ್ ತೊರೆದ ಒಂದು ವಾರದ ನಂತರ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಗುಲಾಂ ನಬಿ ಆಜಾದ್ ಭಾನುವಾರ ಜಮ್ಮುವಿನಲ್ಲಿ ಬಹಿರಂಗ ಸಮಾವೇಶ ನಡೆಸಿದರು. ಕಾಂಗ್ರೆಸ್ ಜೊತೆಗಿನ ಐದು ದಶಕಗಳ ಸುದೀರ್ಘ ಒಡನಾಟವನ್ನು ಮುರಿದುಕೊಂಡ ನಂತರ ಅವರ ಮೊದಲ ರಾಜಕೀಯ ಸಮಾವೇಶ ಇದಾಗಿದ್ದು, ತಮ್ಮ ಹೊಸ ಪಕ್ಷದ ಹೆಸರನ್ನು ಜಮ್ಮು ಮತ್ತು ಕಾಶ್ಮೀರದ ಜನರೇ ನಿರ್ಧರಿಸುತ್ತಾರೆ ಎಂದರು.
ನಾನು ಇನ್ನೂ ನನ್ನ ಪಕ್ಷಕ್ಕೆ ಹೆಸರನ್ನು ನಿರ್ಧರಿಸಿಲ್ಲ. ಜಮ್ಮು ಮತ್ತು ಕಾಶ್ಮೀರದ ಜನರು ಪಕ್ಷದ ಹೆಸರು ಮತ್ತು ಧ್ವಜವನ್ನು ನಿರ್ಧರಿಸುತ್ತಾರೆ. ನಾನು ನನ್ನ ಪಕ್ಷಕ್ಕೆ ಹಿಂದೂಸ್ತಾನಿ ಹೆಸರನ್ನು ನೀಡುತ್ತೇನೆ. ಅದು ಎಲ್ಲರಿಗೂ ಅರ್ಥವಾಗುತ್ತದೆ ಎಂದು ಆಜಾದ್ ತಮ್ಮ ಸಮಾವೇಶದ ಮೂಲಕ ಹೇಳಿದರು. ನನ್ನ ಪಕ್ಷವು ಪೂರ್ಣ ರಾಜ್ಯತ್ವದ ಮರುಸ್ಥಾಪನೆ ಮತ್ತು ಈ ನೆಲದ ಹಕ್ಕು ಹಾಗೂ ಸ್ಥಳೀಯ ನಿವಾಸಿಗಳಿಗೆ ಉದ್ಯೋಗದ ಮೇಲೆ ಕೇಂದ್ರೀಕರಿಸುತ್ತದೆ ಎಂದು ಭರವಸೆ ನೀಡಿದರು.
ಇದನ್ನೂ ಓದಿ: ಗುಜರಾತ್ ಯೂತ್ ಕಾಂಗ್ರೆಸ್ ಅಧ್ಯಕ್ಷ ವಘೇಲಾ ರಾಜೀನಾಮೆ
ಬಸ್‌ಗಳಲ್ಲಿ ಜೈಲಿಗೆ ಹೋಗುತ್ತಾರೆ: ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕಾಂಗ್ರೆಸ್‌ನ ಜನರು ಈಗ ಬಸ್‌ಗಳಲ್ಲಿ ಜೈಲಿಗೆ ಹೋಗುತ್ತಾರೆ. ಅವರು ಡಿಜಿಪಿ, ಕಮಿಷನರ್‌ಗಳಿಗೆ ಕರೆ ಮಾಡುತ್ತಾರೆ. ಅವರ ಹೆಸರು ಬರೆದು ಒಂದು ಗಂಟೆಯೊಳಗೆ ಹೊರ ಬರುತ್ತಾರೆ. ಹೀಗಾಗಿ ಕಾಂಗ್ರೆಸ್ ಬೆಳೆಯಲು ಸಾಧ್ಯವಾಗುತ್ತಿಲ್ಲ ಎಂದು ಆಜಾದ್ ಕುಟುಕಿದರು.
ರಾಹುಲ್ ಗಾಂಧಿ ಹೆಸರನ್ನು ನೇರವಾಗಿ ಪ್ರಸ್ತಾಪಿಸದೆ ಆಜಾದ್ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಪಕ್ಷವನ್ನು ನಾವು ನಮ್ಮ ರಕ್ತ ಮತ್ತು ಬೆವರಿನಿಂದ ನಿರ್ಮಿಸಿದ್ದೆವು. ಕಂಪ್ಯೂಟರ್‌ಗಳಿಂದ ಅಥವಾ ಟ್ವೀಟ್‌ಗಳಿಂದ ಅಲ್ಲ. ಜನರು ನಮ್ಮನ್ನು ದೂಷಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅವರ (ರಾಹುಲ್ ಗಾಂಧಿ) ವ್ಯಾಪ್ತಿಯು ಕಂಪ್ಯೂಟರ್ ಮತ್ತು ಟ್ವೀಟ್‌ಗಳಿಗೆ ಸೀಮಿತವಾಗಿದೆ. ಆದ್ದರಿಂದ ಕಾಂಗ್ರೆಸ್ ನೆಲದ ಮೇಲೆ ಎಲ್ಲಿಯೂ ಕಾಣಿಸುವುದಿಲ್ಲ ಎಂದು ಟೀಕಾ ಪ್ರಹಾರ ನಡೆಸಿದರು.
ಅಲ್ಲದೇ, ಕಾಂಗ್ರೆಸ್ನಲ್ಲಿದ್ದ ತಮ್ಮ ವಿರೋಧಿಗಳ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ ಆಜಾದ್, ಕೆಲವರು ನಮ್ಮ ಇಮೇಜ್ ಹಾಳುಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು. ಸಮಾವೇಶಕ್ಕೂ ಮುನ್ನ ಗುಲಾಂ ನಬಿ ಆಜಾದ್ ಕಾರಿನಲ್ಲಿ ಮರೆವಣಿಗೆ ಮೂಲಕ ಸಮಾವೇಶದ ವೇದಿಕೆಗೆ ಬಂದರು. ಸಾಕಷ್ಟು ಜನರು ಕೂಡ ಆಜಾದ್ ಅವರ ಸಮಾವೇಶದಲ್ಲಿ ಪಾಲ್ಗೊಂಡರು.
ಇನ್ನು, ಆಜಾದ್ ಅವರನ್ನು ಬೆಂಬಲಿಸಿ ಜಮ್ಮು ಮತ್ತು ಕಾಶ್ಮೀರದ ಮಾಜಿ ಉಪಮುಖ್ಯಮಂತ್ರಿ ತಾರಾ ಚಂದ್ ಸೇರಿದಂತೆ 64 ನಾಯಕರು ಈಗಾಗಲೇ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆ. ಇದಲ್ಲದೇ, ಜಮ್ಮುವಿನ ವಿವಿಧ ವಿಶ್ವವಿದ್ಯಾನಿಲಯಗಳ ಕಾಂಗ್ರೆಸ್ ಪಕ್ಷದ ಯುವ ಘಟಕವಾದ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾದ 36ಕ್ಕೂ ಹೆಚ್ಚು ಮುಖಂಡರು ಸಾಮೂಹಿಕವಾಗಿ ಪಕ್ಷ ತೊರೆದಿದ್ದಾರೆ.
ಇದನ್ನೂ ಓದಿ: ದ್ವೇಷವು ದೇಶವನ್ನು ದುರ್ಬಲಗೊಳಿಸುತ್ತದೆ, ಸಮಾಜವನ್ನು ವಿಭಜಿಸುತ್ತದೆ: ರಾಹುಲ್ ಗಾಂಧಿ