ಬೆಂಗಳೂರು: ರಾಜ್ಯ ಕಾಂಗ್ರೆಸ್ ನಾಯಕರು ಇಂದು ಸಂಜೆ ದೆಹಲಿಗೆ ಪ್ರಯಾಣ ಬೆಳೆಸಲಿದ್ದು, ನಾಳೆ ಕೇಂದ್ರ ಚುನಾವಣಾ ಆಯೋಗಕ್ಕೆ ತೆರಳಿ ದೂರು ಸಲ್ಲಿಸಲಿದ್ದಾರೆ. ದೆಹಲಿ ಮಟ್ಟದಲ್ಲಿ ಚಿಲುಮೆ ಹಗರಣವನ್ನು ಕೊಂಡೊಯ್ಯುವ ಸಿದ್ಧತೆ ನಡೆಸಿರುವ ಕಾಂಗ್ರೆಸ್ ನಾಯಕರು ರಾಜ್ಯದಲ್ಲಿ ನಡೆದಿರುವ ಮತದಾರರ ಖಾಸಗಿ ಮಾಹಿತಿ ಕದಿಯುವ ಯತ್ನವನ್ನು ದೊಡ್ಡ ಮಟ್ಟದ ಹೋರಾಟವಾಗಿ ಪರಿವರ್ತಿಸಲು ಕೈ ನಾಯಕರು ಮುಂದಾಗಿದ್ದಾರೆ.
ಇಂದು ಸಂಜೆ ದೆಹಲಿಗೆ ತೆರಳಲಿರುವ ರಾಜ್ಯ ಕಾಂಗ್ರೆಸ್ ನಾಯಕರಾದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ರಾಜ್ಯಸಭಾ ಸದಸ್ಯ ನಾಸೀರ್ ನಾಳೆ ಕೇಂದ್ರ ಚುನಾವಣಾ ಆಯೋಗಕ್ಕೆ ಲಿಖಿತ ದೂರು ಸಲ್ಲಿಕೆ ಮಾಡಲಿದ್ದಾರೆ. ಮಾಜಿ ಶಾಸಕ ಯು ಬಿ ಬಣಕಾರ್ ಹಾಗೂ ಡಾ. ಶ್ರೀನಿವಾಸ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಬಳಿಕ ಕಾಂಗ್ರೆಸ್ ನಾಯಕರ ಜೊತೆ ದಿಲ್ಲಿಯತ್ತ ಪ್ರಯಾಣ ಬೆಳೆಸಲಿದ್ದಾರೆ.
ನಾಳೆ ಕೇಂದ್ರ ಚುನಾವಣಾ ಆಯೋಗದ ಅಧಿಕಾರಿಗಳ ಭೇಟಿ ಸಾಧ್ಯವಾಗದಿದ್ದರೆ ನ. 23ರಂದು ಭೇಟಿಯಾಗಿ ದೂರು ಸಲ್ಲಿಸಲು ಸಹ ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರೆ.
ಇಡಿ ವಿಚಾರಣೆ: ನವೆಂಬರ್ 23 ರಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ವಿಚಾರಣೆ ಸಹ ನಡೆಯಲಿದೆ. ಜಾರಿ ನಿರ್ದೇಶನಾಲಯದ ವಿಚಾರಣೆಯನ್ನು ಸಹ ಅವರು ಎದುರಿಸಲಿದ್ದಾರೆ. ಈ ಹಿನ್ನೆಲೆ ನಾಳೆಯೇ ದೂರು ಸಲ್ಲಿಸುವ ಸಾಧ್ಯತೆ ಹೆಚ್ಚಿದೆ.
ಇದನ್ನೂ ಓದಿ: ಅಭ್ಯರ್ಥಿ ಘೋಷಿಸುವ ಅಧಿಕಾರ ನನಗಾಗಲಿ ಸಿದ್ದರಾಮಯ್ಯಗಾಗಲಿ ಇಲ್ಲ: ಡಿಕೆಶಿ