ನವದೆಹಲಿ : ನಾಗಾಲ್ಯಾಂಡ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಚಿಸಲಾಗಿದ್ದ ಕಾಂಗ್ರೆಸ್ ನಿಯೋಗ ಗುರುವಾರ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ವರದಿ ಸಲ್ಲಿಸಿದೆ.
ನಿಯೋಗದ ಸದಸ್ಯರಾದ ಜಿತೇಂದ್ರ ಸಿಂಗ್ (ಎಐಸಿಸಿ ಪ್ರಧಾನ ಕಾರ್ಯದರ್ಶಿ), ಗೌರವ್ ಗೊಗೊಯ್ (ಸಂಸದ) ಮತ್ತು ಅಜೋಯ್ ಕುಮಾರ್ (ಕಾಂಗ್ರೆಸ್ ಉಸ್ತುವಾರಿ) ಸೋನಿಯಾ ಗಾಂಧಿ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ವರದಿ ನೀಡಿದೆ.
ವರದಿ ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅಜೋಯ್ ಕುಮಾರ್, ಗೃಹ ಸಚಿವ ಅಮಿತ್ ಶಾ ಅವರು ಸಂಸತ್ತಿನಲ್ಲಿ ಆ ಘಟನೆ ಬಗ್ಗೆ ಗುರುತು ಸಿಗದೆ ಇದ್ದುದ್ದರಿಂದ ಈ ರೀತಿ ಸೈನಿಕರು ಮಾಡಿದ್ದಾರೆ ಎಂದು ಸುಳ್ಳು ಹೇಳಿದ್ದಾರೆ.
ಆದರೆ, ಪ್ರತ್ಯಕ್ಷದರ್ಶಿಗಳು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಫೈರಿಂಗ್ ಮಾಡುವ ಮೊದಲು ಎಚ್ಚರಿಕೆ ನೀಡಿರಲಿಲ್ಲ ಎಂದಿದ್ದಾರೆ ಎಂಬ ಬಗ್ಗೆ ತಿಳಿಸಿದ್ದಾರೆ ಎಂದು ವಿವರಿಸಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಘಟನೆಯ ನಂತರ ಗೃಹ ಸಚಿವರು ಜೈಪುರದಲ್ಲಿ ಕಾರ್ಯಕ್ರಮಕ್ಕೆ ಹೋಗಿದ್ದರು. ಆದರೂ ಅವರು ಸ್ಥಳಕ್ಕೆ ಭೇಟಿ ನೀಡಿಲ್ಲ, ಈ ಹಿನ್ನೆಲೆ ನಾವು ಅವರ ರಾಜೀನಾಮೆಗೆ ಒತ್ತಾಯಿಸುತ್ತಿದ್ದೇವೆ ಎಂದಿದ್ದಾರೆ.
ಇದನ್ನೂ ಓದಿ : ಮೊಬೈಲ್ ಕೊಡದಿದ್ದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ 12ರ ಬಾಲಕ
ಕೇಂದ್ರವು ಈಶಾನ್ಯ ರಾಜ್ಯದ ಬಗ್ಗೆ ಮಲತಾಯಿಯ ರೀತಿಯಲ್ಲಿ ವರ್ತಿಸಿದೆ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಈ ಪ್ರದೇಶದಲ್ಲಿ ಆತಂಕ ಮನೆ ಮಾಡಿದೆ. ಅವರ ತಪ್ಪು ನೀತಿಗಳಿಂದಾಗಿ ಕ್ರಿಸ್‌ಮಸ್ ಆಚರಣೆಯ ಬದಲು ಗುಂಡಿನ ದಾಳಿ ನಡೆದಿದೆ. ಜನ ರೋದಿಸುತ್ತಿದ್ದಾರೆ ಹಾಗೆ ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ ನೀಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ದೂರಿದರು.
ನಾಗಾಲ್ಯಾಂಡ್ ಹತ್ಯೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವರು ಸಂಸತ್ತಿನ ದಿಕ್ಕು ತಪ್ಪಿಸಿದ್ದಾರೆ. ತಮ್ಮ ಭಾಷಣದಲ್ಲಿ ಒಂದೇ ಒಂದು ವಿಷಾದದ ಭಾವನೆಯೂ ಅವರಲ್ಲಿ ಇರಲಿಲ್ಲ ಎಂದು ಈ ವೇಳೆ ಉಲ್ಲೇಖಿಸಿದರು.
ಏನಿದು ಘಟನೆ?
ಈ ತಿಂಗಳ ಆರಂಭದಲ್ಲಿ ನಾಗಾಲ್ಯಾಂಡ್‌ನ ಮೋನ್ ಜಿಲ್ಲೆಯ ತಿಜಿತ್ ಪ್ರದೇಶದಲ್ಲಿನ ದಾಳಿಯಲ್ಲಿ ಭದ್ರತಾ ಸಿಬ್ಬಂದಿಯ ಗುಂಡಿಗೆ 14 ನಾಗರಿಕರು ಸಾವಿಗೀಡಾಗಿದ್ದರು. ಈ ಸಂಬಂಧ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಲಾಗಿದ್ದು, ಈ ಘಟನೆಯ ಬಗ್ಗೆ ಒಂದು ತಿಂಗಳೊಳಗೆ ವರದಿ ಸಲ್ಲಿಸಲಾಗುವುದು ಎಂದು ಅಮಿತ್ ಶಾ ಹೇಳಿದ್ದರು.