ನವದೆಹಲಿ: ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವುದು ಖಚಿತವಾಗಿದೆ. ಈ ಕುರಿತು ಮಾತನಾಡಿದ ಕಾಂಗ್ರೆಸ್ ವಕ್ತಾರ ಪವನ್ ಖೇರಾ, ನಾವು ಸರ್ಕಾರ ರಚನೆಯ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತೇವೆ. ಇದು ನಾವು ನಿರೀಕ್ಷಿಸಿದ ಗೆಲುವು ಎಂದು ಈಟಿವಿ ಭಾರತಕ್ಕೆ ತಿಳಿಸಿದರು.
ಯಾರು ಸಿಎಂ ಆಗ್ತಾರೆ ಎಂಬುದನ್ನು ಪಕ್ಷ ನಿರ್ಧರಿಸುತ್ತದೆ. ಈಗಾಗಲೇ ಮುಖ್ಯಮಂತ್ರಿ ಸ್ಥಾನಕ್ಕೆ ಹಲವು ಹೆಸರುಗಳು ಕೇಳಿಬಂದಿವೆ. ಐವರ ಹೆಸರುಗಳನ್ನು ಪಕ್ಷದ ನಾಯಕತ್ವ ಗಂಭೀರವಾಗಿ ಪರಿಗಣಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಅವರಲ್ಲಿ ಪ್ರತಿಭಾ ಸಿಂಗ್, ಸುಖವಿಂದರ್ ಸಿಂಗ್ ಸುಖು, ಮುಖೇಶ್ ಅಗ್ನಿಹೋತ್ರಿ, ಠಾಕೂರ್ ಕೌಲ್ ಸಿಂಗ್ ಮತ್ತು ಆಶಾ ಕುಮಾರಿ ಸೇರಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಒಂದಕ್ಕಿಂತ ಹೆಚ್ಚು ಮುಖ್ಯಮಂತ್ರಿ ಅಭ್ಯರ್ಥಿಗಳು ಕಣಕ್ಕಿಳಿದಿರುವುದು ಒಳ್ಳೆಯ ಸಂಕೇತ. ಹಿಮಾಚಲ ಪ್ರದೇಶದ ಗೆಲುವು ಮುಂದಿನ ದಿನಗಳಲ್ಲಿ ಪಕ್ಷದ ನಾಯಕತ್ವಕ್ಕೆ ಬಲ ತುಂಬುವುದು ಖಂಡಿತ. ಮುಂಬರುವ ಚುನಾವಣೆಯಲ್ಲಿ, ಹಿಮಾಚಲದ ಗೆಲುವು ಖಂಡಿತವಾಗಿಯೂ ನಮ್ಮ ಕಾರ್ಯಕರ್ತರು ಮತ್ತು ಎಲ್ಲಾ ನಾಯಕರಿಗೆ ಉತ್ತೇಜನ ನೀಡುತ್ತದೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಕಮಾಲ್.. ಸಂಭ್ರಮಾಚರಣೆಯಲ್ಲಿ ಕಾರ್ಯಕರ್ತರು!
ನಾವು ಶಾಸಕರನ್ನು ರಾಜ್ಯದ ಹೊರಗೆ ಕರೆದೊಯ್ಯದಿರಬಹುದು. ಆದರೆ ಅವರನ್ನು ಸುರಕ್ಷಿತವಾಗಿರಿಸಲು ನಾವು ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಬಿಜೆಪಿ ತನ್ನ ತಂತ್ರಗಳನ್ನು ಹೇಗೆ ರೂಪಿಸುತ್ತದೆ ಎಂಬುದು ಎಲ್ಲರಿಗೂ ತಿಳಿದಿದೆ ಎಂದರು.
ಇಲ್ಲಿಯವರೆಗಿನ ಮಾಹಿತಿ ಪ್ರಕಾರ, ಕಾಂಗ್ರೆಸ್ 68 ಸ್ಥಾನಗಳಲ್ಲಿ 40 ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ. ಇದು ಹಿಮಾಚಲದಲ್ಲಿ ಸರ್ಕಾರ ರಚಿಸಲು ಬೇಕಿರುವ ಸಂಖ್ಯೆಗಿಂತ ಹೆಚ್ಚೇ ಇದೆ. ಬಿಜೆಪಿ 24 ಕ್ಷೇತ್ರಗಳಲ್ಲಿ ರಲ್ಲಿ ಮುನ್ನಡೆ ಸಾಧಿಸಿದೆ.