ನವದೆಹಲಿ: ಉದಯ್‌ಪುರದಲ್ಲಿ ಇಂದಿನಿಂದ ಪ್ರಾರಂಭವಾಗಲಿರುವ ಕಾಂಗ್ರೆಸ್‌ನ ಮೂರು ದಿನಗಳ 'ಚಿಂತನ್ ಶಿಬಿರ' ಸಮಾವೇಶದಲ್ಲಿ ರೈತರ ಸಮಸ್ಯೆಗಳು ಮತ್ತು ಮುಂಬರುವ ಚುನಾವಣೆಗೆ ಪಕ್ಷವನ್ನು ಬಲಪಡಿಸುವ ಕುರಿತಾದ ಚರ್ಚೆ ನಡೆಯಲಿದೆ. ಕಾರ್ಯಕ್ರಮದ ಹಿನ್ನೆಲೆಯಲ್ಲಿ ಇಂದು ಬೆಳ್ಳಂಬೆಳಗ್ಗೆ ರಾಹುಲ್ ಗಾಂಧಿ ಉದಯ್‌ಪುರಕ್ಕೆ ಆಗಮಿಸಿದರು.
ಚಿಂತನ್ ಶಿಬಿರದಲ್ಲಿ ನಾಯಕರು ಕೇಂದ್ರ-ರಾಜ್ಯ ಸಂಬಂಧ, ಈಶಾನ್ಯ ರಾಜ್ಯಗಳ ಪರಿಸ್ಥಿತಿ, ಜಮ್ಮು ಮತ್ತು ಕಾಶ್ಮೀರ ಸಮಸ್ಯೆ ಮತ್ತು ಕೋಮು ಧ್ರುವೀಕರಣದ ಬಗ್ಗೆ ಚರ್ಚಿಸಲಿದ್ದಾರೆ. ಇದರ ಜೊತೆಗೆ ರಾಜಕೀಯ, ಆರ್ಥಿಕ, ರೈತರು, ಯುವಜನತೆ ಮತ್ತು ಸಾಂಸ್ಥಿಕ ವಿಷಯಗಳ ಬಗೆಗೂ ಚರ್ಚಿಸುವ ಸಾಧ್ಯತೆಯಿದೆ. ಇದಲ್ಲದೇ, ಸಾರ್ವಜನಿಕ ವಲಯದ ಬಂಡವಾಳ ಹಿಂತೆಗೆದುಕೊಳ್ಳುವಿಕೆ, ಏರುತ್ತಿರುವ ಹಣದುಬ್ಬರ, ಅಲ್ಪಸಂಖ್ಯಾತರ ಸಮಸ್ಯೆಗಳು ಮತ್ತು ಮಹಿಳೆಯರ ಸಮಸ್ಯೆಗಳು, ನಿರುದ್ಯೋಗ, ಹೊಸ ಶಿಕ್ಷಣ ನೀತಿ, ಎಂಎಸ್‌ಪಿ ಸಕ್ರಮ, ಸಾಲ ಮನ್ನಾ , ಗೋಧಿ ಬೆಲೆ ವಿಚಾರ ಹಾಗೂ ರಾಷ್ಟ್ರೀಯ, ರಾಜ್ಯ, ಜಿಲ್ಲಾ ಮತ್ತು ಬ್ಲಾಕ್ ಮಟ್ಟದ ಸುಧಾರಣೆಗಳ ಬಗ್ಗೆ ಚಿಂತನ ಮಂಥನ ನಡೆಯಲಿದೆ. ಮುಖ್ಯವಾಗಿ, 'ಒಂದು ಕುಟುಂಬ ಒಂದು ಟಿಕೆಟ್' ಕಾರ್ಯತಂತ್ರದ ಕುರಿತು ಸಮಾಲೋಚನೆ ನಡೆಯಲಿದೆ ಎನ್ನಲಾಗಿದೆ.
2024ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ಹೇಗೆ ಸಜ್ಜಾಗಬೇಕು ಹಾಗೂ ಗುಜರಾತ್, ಹಿಮಾಚಲ ಪ್ರದೇಶ, ಕರ್ನಾಟಕ, ಮಧ್ಯಪ್ರದೇಶ, ಛತ್ತೀಸ್ಗಢ ಹಾಗೂ ರಾಜಸ್ಥಾನಗಳ ವಿಧಾನಸಭಾ ಚುನಾವಣೆಗಳಿಗೆ ಯಾವ ರೀತಿ ಸಿದ್ಧತೆಗಳನ್ನು ನಡೆಸಬೇಕು ಎಂಬ ವಿಚಾರದ ಅಭಿಪ್ರಾಯ ಸಂಗ್ರಹವಾಗಲಿದೆ ಎಂದು ಪಕ್ಷದ ನಾಯಕರೊಬ್ಬರು ಹೇಳಿದರು.
ಮೊದಲ ದಿನವಾದ ಇಂದು ಸೋನಿಯಾ ಗಾಂಧಿ ಶಿಬಿರ ಉದ್ದೇಶಿಸಿ ಮಾತನಾಡಲಿದ್ದಾರೆ. ಕೊನೆಯ ದಿನ ಜನರನ್ನು ಉದ್ದೇಶಿಸಿ ರಾಹುಲ್ ಗಾಂಧಿ ಭಾಷಣ ಮಾಡಲಿದ್ದಾರೆ.
ಇದನ್ನೂ ಓದಿ: 'ವಿಪಕ್ಷ ನಾಯಕರೊಬ್ರು ನಾನು ಎರಡು ಬಾರಿ ಪ್ರಧಾನಿಯಾಗಿದ್ದು ಸಾಕು ಎಂದಿದ್ದರು'