ನವದೆಹಲಿ: ಸದನದ ಕಲಾಪಗಳನ್ನು ವಿಡಿಯೋ ಚಿತ್ರೀಕರಣ ಮಾಡಿದ್ದಕ್ಕಾಗಿ ಕಾಂಗ್ರೆಸ್ ಸಂಸದೆ ರಜನಿ ಪಾಟೀಲ್ ಅವರನ್ನು ಶುಕ್ರವಾರ ರಾಜ್ಯಸಭಾ ಸಭಾಪತಿ ಜಗದೀಪ್ ಧಂಖರ್ ಅವರು ಬಜೆಟ್ ಅಧಿವೇಶನದ ಉಳಿದ ಅವಧಿಗೆ ಅಮಾನತು ಮಾಡಿದ್ದಾರೆ. 'ಸದನಕ್ಕೆ ಅಪಕೀರ್ತಿ ತಂದಿರುವ ದುರ್ನಡತೆ' ಎಂದು ಪರಿಗಣಿಸಿ ಈ ಕೃತ್ಯಕ್ಕೆ ಕಾರಣರಾದ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಭಾನಾಯಕ ಪಿಯೂಷ್ ಗೋಯಲ್ ಅವರು ಸಭಾಪತಿಯವರನ್ನು ಒತ್ತಾಯಿಸಿದ ನಂತರ ಈ ಬೆಳವಣಿಗೆ ನಡೆದಿದೆ.
ಗುರುವಾರ ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಪ್ರತಿಕ್ರಿಯೆಗೆ ವಿರೋಧ ಪಕ್ಷದ ಸಂಸದರು ನಡೆಸಿದ ಪ್ರತಿಭಟನೆಯನ್ನು ಸಂಸದೆ ರಜನಿ ಪಾಟೀಲ್ ವಿಡಿಯೋ ಮಾಡಿದ್ದು, ಟ್ವಿಟರ್ನಲ್ಲಿಯೂ ಹಂಚಿಕೊಂಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಸಭಾಪತಿ ಜಗದೀಪ್ ದಂಖರ್, ಕಲಾಪಕ್ಕೆ ಸಂಬಂಧಿಸಿದಂತಹ ವಿಡಿಯೋವನ್ನು ಸಂಸದೆ ರಜನಿ ಪಾಟೀಲ್ ಅವರು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಇದು ಸಂಸತ್ತಿನ ಘನತೆ ತಕ್ಕುದಲ್ಲ. ಈ ಕುರಿತು ವಿಶೇಷ ಸಮಿತಿ ತನಿಖೆ ನಡೆಸಲಿದೆ. ಸಮಿತಿ ವರದಿ ಸಲ್ಲಿಸುವವರೆಗೆ ಪಾಟೀಲ್ ಅವರನ್ನು ಅಮಾನತುಗೊಳಿಸಲಾಗಿದೆ. ಸಂಸತ್ತಿನ ಪಾವಿತ್ರ್ಯವನ್ನು ಕಾಪಾಡುವ ಸಲುವಾಗಿ ಈ ವಿಷಯವನ್ನು ಹೊರಗಿನ ಯಾವುದೇ ತನಿಖಾ ಏಜೆನ್ಸಿಗಳಿಗೆ ಹಸ್ತಾಂತರಿಸುವುದಿಲ್ಲ ಎಂದರು.
ಇದಕ್ಕೂ ಮುನ್ನ ವಂದನಾ ನಿರ್ಣಯದ ಮೇಲೆ ಪ್ರಧಾನಿ ನರೇಂದ್ರ ಮೋದಿ ಮಾತನಾಡುವಾಗ ಸದನದ ಕಲಾಪದ ಚಿತ್ರೀಕರಣ ಸಂಬಂಧ ಅಭಿಪ್ರಾಯ ತಿಳಿಸುವಂತೆ ಧಂಖರ್ ಅವರು ಎಲ್ಲ ಪಕ್ಷದ ನಾಯಕರನ್ನು ಕೇಳಿದ್ದರು. ಈ ವೇಳೆ ರಜನಿ ಪಾಟೀಲ್ ಅವರ ನಡೆಯ ಬಗ್ಗೆ ಸಚಿವ ಪಿಯೂಷ್ ಗೋಯಲ್ ಆಕ್ಷೇಪ ವ್ಯಕ್ತಪಡಿಸಿ, ತನಿಖೆ ನಡೆಸುವಂತೆ ಒತ್ತಾಯಿಸಿದ್ದರು. ಇದೀಗ ತನಿಖೆಗೆ ಆದೇಶಿಸಿರುವ ಜಗದೀಪ್ ದಂಖರ್, ಇದೇ ವೇಳೆ ಸಂಸದೆಯನ್ನು ಬಜೆಟ್ ಅಧಿವೇಶನದ ಉಳಿದ ಅವಧಿಗೆ ಅಮಾನತುಗೊಳಿಸಿದ್ದಾರೆ.
ಕಠಿಣ ಶಿಕ್ಷೆ ಸರಿಯಲ್ಲ: ಅಮಾನತು ಶಿಕ್ಷೆಯ ಬಗ್ಗೆ ಪ್ರತಿಕ್ರಿಯಿಸಿದ ಸಂಸದೆ ರಜನಿ ಪಾಟೀಲ್, ನಾನು ಉದ್ದೇಶಪೂರ್ವಕವಾಗಿ ಈ ಕೆಲಸ ಮಾಡಿಲ್ಲ. ಹೀಗಿದ್ದರೂ ಇಂತಹ ಕಠಿಣ ಶಿಕ್ಷೆ ನೀಡಿರುವುದು ಸರಿಯಲ್ಲ ಎಂದರು. ನಾನು ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಕ್ಕೆ ಸೇರಿದವಳು. ನನಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ದೇಶದ ಅಭಿವೃದ್ಧಿಗೆ ಉತ್ತರ ಪ್ರದೇಶದ ಕೊಡುಗೆ ಮಹತ್ತರ: ಪ್ರಧಾನಿ ಮೋದಿ