ಮಧುರೈ (ತಮಿಳುನಾಡು): ಭಾರತ ಅಂಗವಿಕಲರ ಕ್ರಿಕೆಟ್ ತಂಡದ ನಾಯಕನಿಗೆ ಬಸ್ ಕಂಡಕ್ಟರ್ 'ಅಂಗವಿಕಲರಿಗೆ ಬಸ್‌ನಲ್ಲಿ ಪ್ರಯಾಣಿಸಲು ಅವಕಾಶವಿಲ್ಲ' ಎಂದು ನಿರಾಕರಿಸಿ ಅವರ ಜೊತೆ ಅಸಭ್ಯವಾಗಿ ನಡೆದಕೊಂಡ ಘಟನೆ ತಮಿಳುನಾಡಿನ ಮಧುರೈನಲ್ಲಿ ನಡೆದಿದೆ. ಸಚಿನ್ ಶಿವ ಎಂಬವರು ಅವಮಾನ ಅನುಭವಿಸಿದ್ದಾರೆ.
ಸಚಿನ್ ಶಿವ ನಿನ್ನೆ (ಏಪ್ರಿಲ್) ರಾತ್ರಿ ಚೆನ್ನೈನ ಕೋಯಂಬೇಡು ಬಸ್ ನಿಲ್ದಾಣದಿಂದ ಮಧುರೈಗೆ ತೆರಳಲು ತಮಿಳುನಾಡು ರಾಜ್ಯ ಸಾರಿಗೆ ಸಂಸ್ಥೆಯ ಶೌಚಾಲಯ ಸೌಲಭ್ಯವುಳ್ಳ ಬಸ್‌ನಲ್ಲಿ ಪ್ರಯಾಣಿಸಲು ಬಸ್ ಹತ್ತಿದ್ದರು. ಆದರೆ, ಬಸ್ ಕಂಡಕ್ಟರ್ ಬಸ್ಸಿನಲ್ಲಿ ವಿಕಲಚೇತನರಿಗೆ ಪ್ರಯಾಣಿಸಲು ಅವಕಾಶವಿಲ್ಲ, ಹತ್ತಬೇಡಿ ಎಂದು ಹೇಳಿದ್ದಾರೆ. ಇದನ್ನು ಪ್ರಶ್ನಿಸಿದ ಸಚಿನ್ ಶಿವ, "ಅಂಗವಿಕಲರು ಇಂತಹ ಬಸ್ಗಳಲ್ಲಿ ಪ್ರಯಾಣಿಸಲು ಅವಕಾಶವಿದೆ" ಎಂದು ಹೇಳಿದ್ದಾರೆ.
ಅದಕ್ಕೆ ಕಂಡಕ್ಟರ್, "ನಾನು ನಿನ್ನ ಮುಖ ಮುರಿಯುತ್ತೇನೆ. ನನಗೆ ಎಲ್ಲವೂ ತಿಳಿದಿದೆ" ಎಂದು ಬೆದರಿಸಿದ್ದಾನೆ. ಅಲ್ಲದೇ ಪೊಲೀಸರ ಮುಂದೆ, "ಮಧುರೈಗೆ ಬಾ ನಿನ್ನ ನೋಡಿಕೋಳ್ಳುತ್ತೇನೆ" ಎಂದು ಸಾರ್ವಜನಿಕವಾಗಿ ಬೆದರಿಕೆ ಹಾಕಿ ಸಚಿನ್ ಅವರನ್ನು ಬಸ್ ನಿಲ್ದಾಣದಲ್ಲಿಯೇ ಬಿಟ್ಟು ತೆರಳಿದ್ದಾರೆ. ನಂತರ ಮತ್ತೊಂದು ಬಸ್‌ನಲ್ಲಿ ಪ್ರಯಾಣಿಸಿ ಸಚಿನ್ ಶಿವ ನಡೆದ ಕಹಿ ಘಟನೆ ಬಗ್ಗೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಭಾರತೀಯ ಅಂಗವಿಕಲರ ಕ್ರಿಕೆಟ್ ತಂಡದ ನಾಯಕನಿಗೇ ಇಂತಹ ಪರಿಸ್ಥಿತಿ ಬಂದರೆ ಸರ್ಕಾರಿ ಬಸ್ಸಿನಲ್ಲಿ ಇತರ ಅಂಗವಿಕಲರು ಮತ್ತು ಅಂಧರ ಗತಿಯೇನು?. ಸರ್ಕಾರಿ ನೌಕರರು ಈ ರೀತಿ ನಡೆದುಕೊಳ್ಳುವುದು ಸರಿಯೇ ಎಂದು ಸಚಿನ್ ಪ್ರಶ್ನಿಸಿದ್ದರು. ಇದೇ ವೇಳೆ ಘಟನೆ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಮನವಿ ಮಾಡಿದ್ದರು. ಈ ಘಟನೆ ಮುನ್ನೆಲೆಗೆ ಬರುತ್ತಿದ್ದಂತೆ ಬಸ್ ಕಂಡಕ್ಟರ್ನನ್ನು ಕೆಲಸದಿಂದ ಅಮಾನತು ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಸಲಿಂಗ ವಿವಾಹ: ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳನ್ನೂ ಪ್ರತಿವಾದಿಯನ್ನಾಗಿಸಲು ಕೇಂದ್ರದ ಒತ್ತಾಯ