ಪ್ರತಾಪ್ಗಢ (ಉ.ಪ್ರ): ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮ ತಮ್ಮ ಆತ್ಮ ಚರಿತ್ರೆಯಲ್ಲಿ ಭಾರತೀಯ ನಾಯಕರ ಹೆಸರು ಪ್ರಸ್ತಾಪ ಕುರಿತಂತೆ ಭಾರತದಲ್ಲಿ ಅಪಸ್ವರ ಕೇಳಿ ಬಂದಿದೆ. ಇದೀಗ ಒಬಾಮ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಕೋರಿ ಸಿವಿಲ್ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಪ್ರತಾಪ್ಗಢ ಜಿಲ್ಲೆಯ ಲಾಲ್ಗಂಜ್ ಸಿವಿಲ್ ಕೋರ್ಟ್ನಲ್ಲಿ ಆಲ್ ಇಂಡಿಯಾ ರೂರಲ್ ಬಾರ್ ಅಸೋಸಿಯೇಷನ್‌ನ ರಾಷ್ಟ್ರೀಯ ಅಧ್ಯಕ್ಷ ಜ್ಞಾನ ಪ್ರಕಾಶ್ ಶುಕ್ಲಾ ಅವರು ಒಬಾಮ ವಿರುದ್ಧ ಎಫ್ಐಆರ್ ದಾಖಲಿಸುವಂತೆ ನಿರ್ದೇಶನ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಇನ್ನು ಈ ಅರ್ಜಿ ಸಂಬಂಧ ಡಿಸೆಂಬರ್ 1ರಂದು ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ಲಾಲ್ಗಂಜ್ ಸಿವಿಲ್ ಕೋರ್ಟ್ ತಿಳಿಸಿದೆ.
ಒಬಾಮ ತಮ್ಮ ಪುಸ್ತಕದಲ್ಲಿ ರಾಹುಲ್ ಗಾಂಧಿ ಮತ್ತು ಡಾ.ಮನಮೋಹನ್ ಸಿಂಗ್ ಬಗ್ಗೆ ಉಲ್ಲೇಖಿಸಿದ್ದಾರೆ. ಅವರ ಹೇಳಿಕೆಗಳು ಭಾರತದ ಪ್ರಜಾಪ್ರಭುತ್ವ ಮತ್ತು ಸಾರ್ವಭೌಮ ರಾಷ್ಟ್ರದ ಆಂತರಿಕ ರಾಜಕೀಯ ವಿಷಯದಲ್ಲಿ ಹಸ್ತಕ್ಷೇಪ ಮಾಡಿದ ಅಪರಾಧವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಅಲ್ಲದೇ ಒಬಾಮ ಹೇಳಿಕೆಯಿಂದಾಗಿ ಕಾಂಗ್ರೆಸ್ ಅನುಯಾಯಿಗಳ ಹಾಗೂ ಭಾರತೀಯರಿಗೆ ನೋವುಂಟಾಗಿದೆ. ಹೀಗಾಗಿ ಅವರ ವಿರುದ್ಧ ಎಫ್ಐಆರ್ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಇಷ್ಟೇ ಅಲ್ಲದೆ ಒಬಾಮ ವಿರುದ್ಧ ಎಫ್ಐಆರ್ ದಾಖಲಿಸದಿದ್ದರೆ ದೆಹಲಿಯ ಯುಎಸ್ ರಾಯಭಾರ ಕಚೇರಿಯ ಮುಂಭಾಗ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಎಚ್ಚರಿಸಿದ್ದಾರೆ.